ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ: ಚಂದ್ರಶೇಖರ ಸ್ವಾಮೀಜಿ
ವೆಬಿನಾರ್ ಮೂಲಕ ಸಂವಾದ ಕಾರ್ಯಕ್ರಮ

ಮಂಗಳೂರು : ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ತೆರವಾಗಿದೆ. ಆದರೆ ಶಾಲಾ ಕಾಲೇಜುಗಳು ಇನ್ನೂ ಆರಂಭಗೊಳ್ಳಲಿಲ್ಲ. ಈ ಪರಿಸ್ಥಿತಿಯಲ್ಲಿ ಮಕ್ಕಳು ಹಾದಿ ತಪ್ಪುವ ಅಪಾಯತೆ ಇರುವುದರಿಂದ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಚಲನವಲನದ ಬಗ್ಗೆ ವಾಚ್ ಡಾಗ್ ಕೆಲಸವನ್ನು ಪೋಷಕರು ಮಾಡಬೇಕಿದೆ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಸೋಮವಾರ ವೆಬಿನಾರ್ ಮೂಲಕ ವಿಶ್ವದ ನಾನಾ ಭಾಗದಲ್ಲಿದ್ದ ಅನುಯಾಯಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳ 145 ಮಂದಿ ಭಾಗವಹಿಸಿದ್ದರು. ಈ ಭಾರಿ ಮಕ್ಕಳ ಮಾನಸಿಕ ಸ್ಥಿತಿ-ಬದಲಾವಣೆಯ ಬಗ್ಗೆ ವಿಶೇಷವಾಗಿ ಚರ್ಚಿಸಲಾಯಿತು.
ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅನ್‌ಲೈನ್ ಪಾಠ ಹೆಸರಿನಲ್ಲಿ ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್‌ನೊಂದಿಗೆ ಇಂಟರ್‌ನೆಟ್ ನೀಡಲಾಗುತ್ತದೆ. ಇದರಿಂದಾಗಿ ತಂತ್ರಜ್ಞಾನದ ದುರುಪಯೋಗವಾಗುವ ಸಾಧ್ಯತೆ ಇದೆ. ಬೇಕುಗಳಿಗಿಂತ ಹೆಚ್ಚಾಗಿ ಬೇಡಗಳ ಬಗ್ಗೆ ಮಕ್ಕಳು ತಲೆ ಕೆಡಿಸಿಕೊಳ್ಳುವ ಅಪಾಯತೆ ಇದೆ. ಆದುದರಿಂದ ಪೋಷಕರು ಇಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಕೊಡುವ ಮೊದಲು ಮಕ್ಕಳಿಗೆ ಮನವರಿಕೆ ಮಾಡಬೇಕು. ಬದುಕಿನ ಗುರಿಯ ಬಗ್ಗೆ ಅವರಿಗೆ ಪದೇ ಪದೇ ಸ್ಪಷ್ಟನೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕೋವಿಡ್ 19 ಬಳಿಕ ಮಕ್ಕಳ ನಿಯಂತ್ರಣ, ಅವರ ಮೇಲೆ ನಿಗಾ ಇಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಕೆಲವೊಂದು ಮಕ್ಕಳು ಈಗಾಗಲೇ ಹಾದಿಯನ್ನೂ ತಪ್ಪಿದ್ದಾರೆ. ಆದುದರಿಂದ ತಾವು ಉದ್ಯೋಗ, ಕೆಲಸ ಮಾಡುವುದರೊಂದಿಗೆ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಆನ್‌ಲೈನ್ ಪರೀಕ್ಷೆ ಅಥವಾ ಪಠ್ಯದ ಸಮಯದಲ್ಲಿ ತಮ್ಮ ಮಕ್ಕಳು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವ ವಿಚಾರವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೆತ್ತವರು ಮಾಡಬೇಕು ಎಂದರು.
ಕೋವಿಡ್ 19 ಬಳಿಕ ದೈಹಿಕ ಆರೋಗ್ಯದೊಂದಿಗೆ ಹಲವು ಮಂದಿ ಮಾನಸಿಕ ಆರೋಗ್ಯವನ್ನೂ ಕಳೆದುಕೊಂಡಿದ್ದಾರೆ. ಆದರೆ ಇವೆಲ್ಲರೂ ಸೀಮಿತ ಅವಧಿಯ ಸಮಸ್ಯೆ ಎಂಬುದನ್ನು ಎಲ್ಲರೂ ಪರಿಗಣಿಸಬೇಕಿದೆ. ಬದುಕಿನ ಬಗ್ಗೆ ಹತಾಶೆ ಕಾಣುವ ಬದಲು ಪಾಸಿಟಿವ್ ಆಗಿ ಪರಿವರ್ತಿಸಿಕೊಳ್ಳಬೇಕಿದೆ ಎಂದರು.







