ಕೊರೋನ 4.7 ಕೋಟಿಗೂ ಅಧಿಕ ಮಹಿಳೆಯರು, ಹೆಣ್ಣುಮಕ್ಕಳನ್ನು ತೀವ್ರ ಬಡತನಕ್ಕೆ ತಳ್ಳಲಿದೆ: ವಿಶ್ವಸಂಸ್ಥೆ ವರದಿ

ಹೊಸದಿಲ್ಲಿ, ಸೆ. 3: ಕೊರೋನ ಸಾಂಕ್ರಾಮಿಕ ರೋಗ ಮಹಿಳೆ ಹಾಗೂ ಪುರುಷರ ನಡುವಿನ ಬಡತನದ ಅಂತರವನ್ನು ವ್ಯಾಪಕಗೊಳಿಸಿದೆ. ಅಲ್ಲದೆ, ಶೇ. 4.7 ಕೋಟಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು 2021ರ ಒಳಗೆ ತೀವ್ರ ಬಡತನಕ್ಕೆ ತಳ್ಳಲಿದೆ ಎಂದು ವಿಶ್ವಸಂಸ್ಥೆಯ ನೂತನ ವಿಶ್ಲೇಷಣೆ ಹೇಳಿದೆ.
ವಿಶ್ವಸಂಸ್ಥೆಯ ಮಹಿಳೆ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಸಂಘಟಿಸಿದ ದತ್ತಾಂಶದ ಪ್ರಕಾರ, 2019 ಹಾಗೂ 2021ರ ನಡುವೆ ಮಹಿಳೆಯರ ಬಡತನದ ದರ ಶೇ. 2.7 ಇಳಿಕೆಯಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಈಗ ಮಹಿಳೆಯರ ಬಡತನದ ದರ ಶೇ. 9.1 ಏರಿಕೆಯಾಗಲಿದೆ. ಕೊರೋನ ಸಾಂಕ್ರಾಮಿಕ ರೋಗ ಒಟ್ಟು 9.6 ಕೋಟಿ ಜನರನ್ನು ತೀವ್ರ ಬಡತನಕ್ಕೆ ತಳ್ಳಲಿದೆ. ಇವರಲ್ಲಿ 4.7 ಕೋಟಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಸೇರಲಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ತಮ್ಮ ‘‘ಫ್ರಂ ಇನ್‌ಸೈಟ್ ಟು ಆ್ಯಕ್ಷನ್: ಜಂಡರ್ ಇಕ್ವಾಲಿಟಿ ಇನ್ ದಿ ವೇಕ್ ಆಫ್ ಕೋವಿಡ್-19’’ ಶೀರ್ಷಿಕೆಯ ವರದಿಯಲ್ಲಿ ಹೇಳಿದೆ.
25 ಹಾಗೂ 34 ವಯೋಮಾನದ ನಡುವಿನ ಪ್ರತಿ 100 ಪುರುಷರಿಗೆ ಪ್ರತಿಯಾಗಿ 118 ಮಹಿಳೆಯರು ತೀವ್ರ ಬಡತನದಲ್ಲಿ ಜೀವಿಸಲಿದ್ದಾರೆ. 2030ರ ಹೊತ್ತಿಗೆ ಪ್ರತಿ 100 ಪುರುಷರಿಗೆ ಪ್ರತಿಯಾಗಿ 121 ಮಹಿಳೆಯರು ಬಡತನದಲ್ಲಿ ಬದಕಲಿದ್ದಾರೆ ಎಂದು ವರದಿ ಅಂದಾಜಿಸಿದೆ. ‘‘ಮಹಿಳೆಯರ ತೀವ್ರ ಬಡತನ ಏರಿಕೆ ನಾವು ನಮ್ಮ ಸಮಾಜ ಹಾಗೂ ಆರ್ಥಿಕತೆಯನ್ನು ರೂಪಿಸಿದ ರೀತಿಯಲ್ಲಿ ಇರುವ ಆಳವಾದ ನ್ಯೂನತೆಯನ್ನು ತೋರಿಸುತ್ತದೆ’’ ಎಂದು ವಿಶ್ವಸಂಸ್ಥೆಯ ಮಹಿಳಾ ಕಾರ್ಯಕಾರಿ ನಿರ್ದೇಶಕಿ ಫುಮ್‌ಝೈಲೆ ಮ್ಲಾಂಬೊ-ನುಗುಕಾ ಹೇಳಿದ್ದಾರೆ.
ಕುಟುಂಬವನ್ನು ಪೋಷಿಸುವಲ್ಲಿ ಮಹಿಳೆಯರು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿದೆ. ಅವರು ಕಡಿಮೆ ಗಳಿಸುತ್ತಾರೆ, ಕಡಿಮೆ ಉಳಿಸುತ್ತಾರೆ ಹಾಗೂ ಕಡಿಮೆ ಸುರಕ್ಷತೆ ಇರುವ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಾರೆ. ಒಟ್ಟು ಮಹಿಳೆಯ ಉದ್ಯೋಗ ಪುರುಷರಿಗಿಂತ ಶೇ. 19ರಷ್ಟು ಹೆಚ್ಚು ಅಪಾಯದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಶಿಕ್ಷಣ, ಕುಟುಂಬ ಕಲ್ಯಾಣ ಯೋಜನೆ, ಪಾರದರ್ಶಕ ಹಾಗೂ ಸಮಾನ ವೇತನದ ಉತ್ತಮ ಲಭ್ಯತೆ ಹಾಗೂ ಸಾಮಾಜಿಕ ವರ್ಗಾವಣೆ ವಿಸ್ತರಿಸಲು ದೇಶಗಳು ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಿದರೆ 10 ಕೋಟಿ ಮಹಿಳೆಯರನ್ನು ಬಡತನದಿಂದ ಮೇಲೆತ್ತಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತಗಾರ ಅಚಿಮ್ ಸ್ಟೈನರ್ ತಿಳಿಸಿದ್ದಾರೆ.







