ಸಚಿವಾಲಯಗಳು, ಸಾರ್ವಜನಿಕ ರಂಗದ ಸಂಸ್ಥೆಗಳು ಕ್ಯಾಲೆಂಡರ್, ಡೈರಿಗಳನ್ನು ಮುದ್ರಿಸುವುದನ್ನು ನಿಲ್ಲಿಸಲಿದೆ:ಕೇಂದ್ರ ಸರಕಾರ
ಹೊಸದಿಲ್ಲಿ, ಸೆ. 3: ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ರಂಗದ ಸಂಸ್ಥೆಗಳು ಹಾಗೂ ಸರಕಾರಿ ಬ್ಯಾಂಕ್‌ಗಳು ಕ್ಯಾಲೆಂಡರ್, ಡೈರಿ ಹಾಗೂ ಗ್ರೀಟಿಂಗ್ ಕಾರ್ಡ್ಸ್‌ಗಳನ್ನು ಮುದ್ರಿಸುವುದನ್ನು ನಿಲ್ಲಿಸಲಿದೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ.
‘ಆರ್ಥಿಕ ಸೂಚನೆಯ-ಮುದ್ರಣ ಚಟುವಟಿಕೆ’ ಕುರಿತ ಕಚೇರಿ ವಿಜ್ಞಾಪನಾ ಪತ್ರದಲ್ಲಿ, ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ವೆಚ್ಚ ಇಲಾಖೆ ಕಾಫಿ ಟೇಬಲ್ ಬುಕ್ ಮುದ್ರಣದ ಮೇಲೂ ನಿಷೇಧ ಹೇರಿದೆ. ಆದರೆ, ಇ-ಬುಕ್‌ಗೆ ಉತ್ತೇಜನ ನೀಡಿದೆ. ಯೋಜನೆ, ವೇಳಾಪಟ್ಟಿ, ಪ್ರಸಾರಕ್ಕೆ ತಾಂತ್ರಿಕ ಆವಿಷ್ಕಾರ ಬಳಕೆ ಆರ್ಥಿಕ ಲಾಭ ಹಾಗೂ ಪರಿಣಾಮಕಾರಿ ಎಂಬ ಸತ್ಯವನ್ನು ಅರಿತ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯಾವುದೇ ಸಚಿವಾಲಯ, ಇಲಾಖೆಗಳು, ಸಾರ್ವಜನಿಕ ರಂಗದ ಸಂಸ್ಥೆಗಳು, ಸರಕಾರಿ ಬ್ಯಾಂಕ್‌ಗಳು ಹಾಗೂ ಸರಕಾರದ ಇತರ ಸಂಸ್ಥೆಗಳು ಮುಂದಿನ ವರ್ಷ ಬಳಸಲು ಗೋಡೆ ಕ್ಯಾಲೆಂಡರ್, ಡೆಸ್ಕ್‌ಟಾಪ್ ಕ್ಯಾಲೆಂಡರ್, ಡೈರಿ, ಹಬ್ಬದ ಗ್ರೀಟಿಂಗ್ ಕಾರ್ಡ್ ಹಾಗೂ ಇದೇ ರೀತಿಯ ವಸ್ತುಗಳನ್ನು ಮುದ್ರಿಸುವತ್ತ ಯಾವುದೇ ಚಟುವಟಿಕೆಗಳನ್ನು ನಡೆಸದಿರಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಸಚಿವಾಲಯ ತಿಳಿಸಿದೆ.





