‘ಅತ್ಯಾಚಾರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ’: 2009ರ ಪ್ರಕರಣದ ಶಿಕ್ಷೆ ಎತ್ತಿ ಹಿಡಿದ ಗುವಾಹತಿ ಹೈಕೋರ್ಟ್

ಗುವಾಹತಿ, ಸೆ. 3: ಹನ್ನೊಂದು ವರ್ಷಗಳ ಹಳೆಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದ ಗುವಾಹಟಿ ಉಚ್ಚ ನ್ಯಾಯಾಲಯ, ಅತ್ಯಾಚಾರ ಸಂವಿಧಾನದ ಕಲಂ 21ರ ಅಡಿಯಲ್ಲಿ ಸಂತ್ರಸ್ತೆಯ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಪ್ರತಿಪಾದಿಸಿದೆ.
ದಾಖಲೆಯಲ್ಲಿ ಇತರ ಪುರಾವೆಗಳು ಸೂಕ್ತವಾಗಿದ್ದರೆ, ಅತ್ಯಾಚಾರ ಸಂತ್ರಸ್ತೆಯ ಹೇಳಿಕೆಯನ್ನು ಅಪರಾಧ ವಾಸ್ತವವಾದದು ಎಂದು ಒಪ್ಪಿಕೊಳ್ಳಬಹುದು ಎಂದು ನ್ಯಾಯಮೂರ್ತಿ ರುಮಿ ಕುಮಾರಿ ಫುಕಾನ್ ಸೋಮವಾರ ನೀಡಿದ ಆದೇಶದಲ್ಲಿ ಹೇಳಿದ್ದಾರೆ.
ಅತ್ಯಾಚಾರ ಸಂವಿಧಾನದ 21ನೇ ಕಲಂ ಅಡಿಯಲ್ಲಿ ಸಂತ್ರಸ್ತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೆ, ಗಾಯಗೊಂಡ ಸಾಕ್ಷಿಗಿಂತ ಅತ್ಯಾಚಾರ ಸಂತ್ರಸ್ತೆಯ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂಬ ಬಗ್ಗೆ ನ್ಯಾಯಾಲಯ ಸಂವೇದನಾಶೀಲವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಮೇಲಿನ ಅಸ್ಸಾಂನ ತೀನ್‌ಸುಕಿಯಾ ಜಿಲ್ಲೆಯ ದಿಗ್ಭೋಯ್ ಪಟ್ಟಣದ ಈಜುಕೊಳದ ಸ್ನಾನದ ಕೊಠಡಿಯಲ್ಲಿ 2009 ನವೆಂಬರ್ 26ರಂದು ರಾತ್ರಿ ಯುವತಿ (20)ಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಯುವತಿ ಕೆಲಸದಿಂದ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿತ್ತು. ಯುವತಿ ದಿಗ್ಭೋಯ್‌ಯ ಆಸ್ಪತ್ರೆಯೊಂದರಲ್ಲಿ ದಿನಗೂಲಿ ನೌಕರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.





