ಅಮೆರಿಕದಲ್ಲಿರುವ ರಾಜತಾಂತ್ರಿಕರ ಮೇಲೆ ಹೊಸ ನಿರ್ಬಂಧ

ವಾಶಿಂಗ್ಟನ್, ಸೆ. 3: ಇನ್ನು ಮುಂದೆ ಚೀನಾದ ಹಿರಿಯ ರಾಜತಾಂತ್ರಿಕರು ಅಮೆರಿಕದ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡುವ ಮೊದಲು ಹಾಗೂ ತಮ್ಮ ರಾಯಭಾರ ಕಚೇರಿಗಳಿಂದ ಹೊರಗೆ 50ಕ್ಕಿಂತ ಹೆಚ್ಚು ಮಂದಿಯ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೊದಲು ಅವರು ವಿದೇಶಾಂಗ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಅಮೆರಿಕ ಬುಧವಾರ ಹೇಳಿದೆ.
ಚೀನಾದಲ್ಲಿರುವ ಅಮೆರಿಕದ ರಾಜತಾಂತ್ರಿಕರ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಅಮೆರಿಕ ಚೀನಾ ರಾಜತಾಂತ್ರಿಕರ ಮೇಲೆ ಈ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ.
ಎಲ್ಲ ಚೀನೀ ರಾಯಭಾರ ಕಚೇರಿಗಳು ಮತ್ತು ಕೌನ್ಸುಲರ್ ಕಚೇರಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರಿಯಾಗಿ ಗುರುತಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದಾಗಿಯೂ ವಿದೇಶಾಂಗ ಇಲಾಖೆ ತಿಳಿಸಿದೆ.
‘‘ನಾವು ಚೀನಾದ ಕ್ರಿಯೆಗಳಿಗೆ ಪ್ರತಿಕ್ರಿಯೆಯನ್ನಷ್ಟೇ ನೀಡಿದ್ದೇವೆ. ಚೀನಾದಲ್ಲಿರುವ ನಮ್ಮ ರಾಜತಾಂತ್ರಿಕರು ಸ್ವಾತಂತ್ರ ಹೊಂದಿದ್ದರೆ, ಅಮೆರಿಕದಲ್ಲಿರುವ ಚೀನಾದ ರಾಯಭಾರಿಗಳೂ ಸ್ವಾತಂತ್ರ ಹೊಂದುತ್ತಾರೆ. ನಮ್ಮ ಇಂದಿನ ಕ್ರಮವು ನಮ್ಮನ್ನು ಈ ದಿಕ್ಕಿನಲ್ಲಿ ಒಯ್ಯುತ್ತವೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದರು.







