ತೈವಾನ್ ಜಲಸಂಧಿಯಿಂದ ಹಿಡಿದು ಹಿಮಾಲಯದವರೆಗೆ ನೆರೆ ದೇಶಗಳನ್ನು ಪೀಡಿಸುವ ಚೀನಾ: ಪಾಂಪಿಯೊ ಆರೋಪ

ವಾಶಿಂಗ್ಟನ್, ಸೆ. 3: ತೈವಾನ್ ಜಲಸಂಧಿಯಿಂದ ಹಿಡಿದು ಹಿಮಾಲಯದವರೆಗೆ ತನ್ನ ನೆರೆಯ ದೇಶಗಳನ್ನು ಪೀಡಿಸುವ ಸ್ಪಷ್ಟ ಧೋರಣೆಯನ್ನು ಚೀನಾದ ಕಮ್ಯುನಿಸ್ಟ್ ಪಕ್ಷವು ಹೊಂದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಹೇಳಿದ್ದಾರೆ.
ಈ ಪೀಡಕ ಮನೋಭಾವವವನ್ನು ಚೀನಾವು ದಕ್ಷಿಣ ಚೀನಾ ಸಮುದ್ರದಲ್ಲೂ ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ವಿದೇಶಾಂಗ ಇಲಾಖೆಯ ಫಾಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭಿಪ್ರಾಯಪಟ್ಟರು.
‘‘ಭಾರತ-ಚೀನಾ ಗಡಿಯಲ್ಲಿ ನೆಲೆಸಿರುವ ಉದ್ವಿಗ್ನತೆಗೆ ಶಾಂತಿಯುತ ಪರಿಹಾರವೊಂದು ಏರ್ಪಡಬೇಕೆಂದು ನಾವು ಬಯಸಿದ್ದೇವೆ. ತೈವಾನ್ ಜಲಸಂಧಿಯಿಂದ ಹಿಡಿದು ಹಿಮಾಲಯದವರೆಗೆ ಹಾಗೂ ಅದರ ನಂತರವೂ ಚೀನಾ ಕಮ್ಯುನಿಸ್ಟ್ ಪಕ್ಷವು ತನ್ನ ನೆರೆಯ ದೇಶಗಳನ್ನು ಪೀಡಿಸುವ ಕೆಲಸದಲ್ಲಿ ತೊಡಗಿದೆ’’ ಎಂದು ಪಾಂಪಿಯೊ ಅಭಿಪ್ರಾಯಪಟ್ಟರು.
‘‘ಚೀನಾ ಕಮ್ಯುನಿಸ್ಟ್ ಪಕ್ಷದ ಸಾಮ್ರಾಜ್ಯಶಾಹಿ ಧೊರಣೆಗೆ ಜವಾಬ್ದಾರವಾಗಿರುವ ಹಾಗೂ ನಮ್ಮ ಮಿತ್ರ ದೇಶ ಫಿಲಿಪ್ಪೀನ್ಸ್ ಮತ್ತು ಇತರ ದೇಶಗಳ ಆರ್ಥಿಕ ವಲಯಗಳಲ್ಲಿ ಕಾನೂನುಬಾಹಿರ ಇಂಧನ ಸಮೀಕ್ಷೆ ಚಟುವಟಿಕೆಗಳನ್ನು ನಡೆಸುತ್ತಿರುವ ಚೀನಾ ಸಂಸ್ಥೆಗಳು ಮತ್ತು ಚೀನೀಯರ ವಿರುದ್ಧ ಅಮೆರಿಕ ಕಳೆದ ವಾರ ದಿಗ್ಬಂಧನಗಳು ಮತ್ತು ವೀಸಾ ನಿರ್ಬಂಧಗಳನ್ನು ಹೇರಿದೆ’’ ಎಂದರು.
ಗಲಪಗೊಸ್ ಸಮೀಪ ಚೀನಾ ಧ್ವಜಗಳನ್ನು ಹೊಂದಿದ 300ಕ್ಕೂ ಅಧಿಕ ಹಡಗುಗಳ ಚಟುವಟಿಕೆಗಳ ಬಗ್ಗೆಯೂ ಅಮೆರಿಕ ಕಳವಳ ಹೊಂದಿದೆ ಎಂದು ಪಾಂಪಿಯೊ ಹೇಳಿದರು. ಈ ಹಡಗುಗಳು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವುದು ಬಹುತೇಕ ಖಚಿತವಾಗಿದೆ ಎಂದರು.
ಗಲಪಗೊಸ್ ದ್ವೀಪಗಳು ಪೆಸಿಫಿಕ್ ಸಾಗರದಲ್ಲಿರುವ ಜ್ವಾಲಾಮುಖಿ ದ್ವೀಪಸಮೂಹವಾಗಿದೆ. ಅದು ಇಕ್ವೆಡಾರ್‌ನ ಒಂದು ರಾಜ್ಯವಾಗಿದೆ.







