ಕೋವಿಡ್ ಹಿನ್ನೆಲೆ: ಉಡುಪಿ ಜಿಲ್ಲಾಧಿಕಾರಿಗೆ ಇಲಾಖಾ ವೈದ್ಯರ ಮನವಿ

ಉಡುಪಿ, ಸೆ.3: ಕೋವಿಡ್-19ರಿಂದ ಉಂಟಾಗಿರುವ ತುರ್ತುಸ್ಥಿತಿಯ ಹಿನ್ನೆಲೆಯಲ್ಲಿ ಇದರ ವಿರುದ್ಧ ಕಳೆದ ಆರು ತಿಂಗಳಿಂದ ಹೋರಾಟ ನಡೆಸುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನುಭವಿಸುತ್ತಿ ರುವ ವಿವಿಧ ತೊಂದರೆಗಳು ಹಾಗೂ ತಮ್ಮ ಬೇಡಿಕೆಗಳ ಕುರಿತು ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಅರ್ಪಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚೆಗೆ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಪ್ರಸಾದ್ ಅವರ ಅಕಾಲ ಹಾಗೂ ಅಸಹಜ ಮರಣದಂತಹ ದುರಾದೃಷ್ಟ ಪ್ರಕರಣಗಳು ಜಿಲ್ಲೆಯಲ್ಲೂ ಮರುಕಳಿಸದ ಹಾಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್-19ರ ಕರ್ತವ್ಯದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳು, ತೊಂದರೆಗಳ ಕುರಿತು ಮನವಿಯ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಕೋವಿಡ್-19 ಉಂಟುಮಾಡಿರುವ ಆರೋಗ್ಯ ತುರ್ತುಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿಗಳು ಅಹರ್ನಿಶಿ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತಿದ್ದಾರೆ. ಆದರೂ ಸಹ ಇವರು ಮೇಲಾಧಿಕಾ ರಿಗಳ ಹಾಗೂ ಸಾರ್ವಜನಿಕರ ಅಸಹನೆಗೆ ಗುರಿಯಾಗುತ್ತಿರು ವುದು ವಿಪರ್ಯಾಸ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗುರಿ ನಿಗದಿಗೆ ವಿಷಾಧ: ಕೋವಿಡ್-19 ಸಮುದಾಯ ಮಟ್ಟದಲ್ಲಿ ಹರಡಿರುವ ಹಿನ್ನೆಲೆಯಲ್ಲಿ ಸರಕಾರ ಕೋವಿಡ್ ಪರೀಕ್ಷೆಗೆ ಜಿಲ್ಲಾವಾರು, ತಾಲೂಕು ವಾರು ಗುರಿಯನ್ನು ನಿಗದಿಪಡಿಸಿ, ಗುರಿಸಾಧನೆಗೆ ಒತ್ತಡ ಹೇರು ತ್ತಿರುವುದು ದುರಾದೃಷ್ಠಕರ. ರ್ಯಾಂಡಮ್ ಪರೀಕ್ಷೆಗೆ ಜಿಲ್ಲೆಯಲ್ಲಿ ಸಾರ್ವಜನಿಕರ ತೀವ್ರ ಅಸಹಕಾರವಿದೆ. ರೋಗಲಕ್ಷಣವಿಲ್ಲದಿದ್ದರೂ ಆಸ್ಪತ್ರೆಗೆ, ಹೋಮ್ ಐಸೋಲೇಷನ್‌ಗೆ ದಾಖಲಾಗುವ ಭೀತಿ, ತಮ್ಮ ಉದ್ಯೋಗದ ಸ್ಥಳ ಹಾಗೂ ಮನೆ ಇರುವ ಪ್ರದೇಶ ಕಂಟೈನ್‌ಮೆಂಟ್ ವಲಯ ಆಗುವ ಆತಂಕಗಳಿಂದ ್ವಾಬ್ ಪರೀಕ್ಷೆಗೆ ನಿರಾಕರಿಸುತಿದ್ದಾರೆ.
ಈ ಸಂದರ್ಭದಲ್ಲಿ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಅನುಚಿತವಾಗಿ ವರ್ತಿಸುವುದು, ಹಣದ ಆಮಿಷಕ್ಕೆ, ಕಮಿಷನ್ ಹಣಕ್ಕೆ ಪರೀಕ್ಷೆ ಮಾಡಿ ಸುಳ್ಳು ವರದಿ ನೀಡುತಿದ್ದೀರಿ ಎಂದು ಆರೋಪಿಸುವುದಲ್ಲದೇ ಹಲ್ಲೆಗೂ ಪ್ರಯತ್ನಿಸಿದ ನಿದರ್ಶನಗಳಿವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ರೋಗಲಕ್ಷಣಗಳಿಲ್ಲದ ಪ್ರಕರಣಗಳನ್ನು ಹೋಮ್ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಸಂದರ್ಭದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಪ್ರಾಥಮಿಕ ಸಂಪರ್ಕವಿರುವ ವ್ಯಕ್ತಿಗಳೂ ಸ್ವಾಬ್ ಪರೀಕ್ಷೆಗೆ ಒಪ್ಪದೇ ಅವಾಚ್ಯವಾಗಿ ನಿಂದಿಸುವುದು, ಹಲ್ಲೆಗೆ ಪ್ರಯತ್ನಿಸುವುದು ದೈನಂದಿನ ಪ್ರಕ್ರಿಯೆ ಎನಿಸಿಕೊಂಡಿದೆ ಎಂದವರು ಹೇಳಿದ್ದಾರೆ.
ಕೋವಿಡ್ ಶಂಕಿತ, ಖಚಿತ ಮೃತದೇಹಗಳ ವಿಲೇವಾರಿಗೆ ವೈದ್ಯಾಧಿಕಾರಿ ಗಳನ್ನು ಸಂಪರ್ಕ ವ್ಯಕ್ತಿಯಾಗಿ ನಿಯೋಜಿಸಿರುವುದರಿಂದ ಅವರ ಮೇಲೆ ಕೆಲಸದ ಒತ್ತಡ ವಿಪರೀತ ಬೀಳುತ್ತಿದೆ. ಮೃತದೇಹವನ್ನು ಸ್ವೀಕರಿಸುವುದರಿಂದ ಅದರ ಅಂತಿಮ ಸಂಸ್ಕಾರದ ಹೊಣೆಯೂ ಇವರ ಮೇಲೆ ಬೀಳುತ್ತಿದೆ. ಹಲವು ಅಹಿತಕರ ಘಟನೆಗಳಿಂದ ಇದು ತೀವ್ರವಾದ ಮಾನಸಿಕ ಒತ್ತಡಕ್ಕೆ ಕಾರಣ ವಾಗುತ್ತಿದೆ. ಇದರಿಂದ ಅವರಿಗೆ ಮುಕ್ತಿ ಸಿಗಬೇಕಾಗಿದೆ ಎಂದು ಮನವಿ ಮಾಡಿಕೊಳ್ಳಲಾಗಿದೆ.
ಮಾನಸಿಕ ಸ್ಕೈರ್ಯ ಕುಸಿತ: ದಿನೇ ದಿನೇ ಹೆಚ್ಚುತ್ತಿರುವ ಕಾರ್ಯಭಾರ, ಮಾನಸಿಕ ಒತ್ತಡ, ಸಿಬ್ಬಂದಿ ಕೊರತೆ, ವಿಶ್ರಾಂತಿ ಇಲ್ಲದ ದುಡಿತ, ಸಾರ್ವಜನಿಕರ ಅವಹೇಳನಗಳಿಂದ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾನಸಿಕ ಸ್ತ್ಥೈರ್ಯ ಕುಸಿಯುತ್ತಿದೆ. ಅವರನ್ನು ಖಿನ್ನತೆಗೆ ನೂಕುತ್ತಿದೆ. ಇದು ನಂಜನಗೂಡು ಘಟನೆಗೆ ಕಾರಣವಾದರೂ ಆಶ್ಚರ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ತಿಳಿವಿಗೆ ಹಲವು ಬೇಡಿಕೆಗಳನ್ನು ಮುಂದಿಟ್ಟಿ ರುವ ಸರಕಾರಿ ವೈದ್ಯರು ಹಾಗೂ ಸಿಬ್ಬಂದಿಗಳು, ಸ್ವಾಬ್ ಪರೀಕ್ಷೆಯನ್ನು ರೋಗ ಲಕ್ಷಣವಿದ್ದವರಿಗೆ ಸೀಮಿತಗೊಳಿಸುವಂತೆ, ಸ್ವಾಬ್ ಪರೀಕ್ಷೆಯ ಗುರಿಯನ್ನು ಅಗತ್ಯಕ್ಕೆ ತಕ್ಕಂತೆ ನಿಗದಿಗೊಳಿಸುವಂತೆಯೂ ಮನವಿಯಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಸಂಘದ ಗೌರವಾಧ್ಯಕ್ಷ ಡಾ.ಮಧುಸೂಧನ್ ನಾಯಕ್, ಅಧ್ಯಕ್ಷ ಡಾ. ಪ್ರಕಾಶ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಡಾ.ನರಸಿಂಹ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.







