ಅಂಖಿದಾಸ್ರನ್ನು ಸಮರ್ಥಿಸಿದ ಫೇಸ್ಬುಕ್

Photo: Facebook/AnkhiDas
ಹೊಸದಿಲ್ಲಿ, ಸೆ.3: ತನ್ನ ಭಾರತೀಯ ನೀತಿ ವಿಭಾಗದ ಮುಖ್ಯಸ್ಥೆ ಅಂಖಿದಾಸ್ ಅವರು ಬಿಜೆಪಿ ಪರ ಧೋರಣೆಯನ್ನು ಹೊಂದಿದ್ದಾರೆಂಬ ಕಾಂಗ್ರೆಸ್ ಪಕ್ಷದ ಆರೋಪಗಳನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ಬುಕ್ ಗುರುವಾರ ತಳ್ಳಿಹಾಕಿದೆ. ದ್ವೇಷ ಭಾಷಣದ ಕುರಿತಾದ ತನ್ನ ನೀತಿಯನ್ನು ಯಾವುದೇ ವ್ಯಕ್ತಿಯು ಏಕಪಕ್ಷೀಯವಾಗಿ ರೂಪಿಸುವುದಿಲ್ಲವೆಂಬುದಾಗಿಯೂ ಅದು ಹೇಳಿದೆ.
ಬಿಜೆಪಿ ಹಾಗೂ ಸಂಘಪರಿವಾರದ ಬೆಂಬಲಿಗರು ಪೋಸ್ಟ್ ಮಾಡುವ ದ್ವೇಷ ಭಾಷಣಗಳ ವಿರುದ್ಧ ಫೇಸ್ಬುಕ್ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೆಂದು ಅಮೆರಿಕದ ಪತ್ರಿಕೆ ವಾಲ್ಸ್ಟ್ರೀಟ್ ಜರ್ನಲ್ ವರದಿಯೊಂದು ಗಮನಸೆಳೆದಿರುವ ಹಿನ್ನೆಲೆಯಲ್ಲಿ ಅದು ಈ ವಿವರಣೆಯನ್ನು ನೀಡಿದೆ.
ಕಾಂಗ್ರೆಸ್ ಪಕ್ಷವು , ಫೇಸ್ಬುಕ್ನ ವರಿಷ್ಠ ಮಾರ್ಕ್ ಝುಕರ್ಬರ್ಗ್ ಅವರಿಗೆ ಇತ್ತೀಚೆಗೆ ಬರೆದಿರುವ ಎರಡು ಪತ್ರಗಳಲ್ಲಿ, ಈ ಬೃಹತ್ ಸಾಮಾಜಿಕ ಜಾಲತಾಣವು ಭಾರತದ ಪ್ರಜಾತಾಂತ್ರಿಕ ಪ್ರಕ್ರಿಯೆ ಹಾಗೂ ಸಾಮಾಜಿಕ ಸೌಹಾರ್ದತೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ದ್ವೇಷ ಭಾಷಣದ ಬಗ್ಗೆ ಆಡಳಿತಾರೂಢ ಬಿಜೆಪಿ ಮುಖಂಡರು, ಕಾರ್ಯಕರ್ತರ ವಿರುದ್ಧ ಮೃದು ನಿಲುವನ್ನು ತಾಳಿದೆ ಎಂಬುದಾಗಿ ಆಪಾದಿಸಿತ್ತು.





