ಜಮ್ಮು ಕಾಶ್ಮೀರ: ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳದಂತೆ ಪಿಡಿಪಿ ನಾಯಕರಿಗೆ ಪೊಲೀಸರ ನಿರ್ಬಂಧ

Photo: thewire.in
ಶ್ರೀನಗರ, ಸೆ. 3: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ನಡೆಯುತ್ತಿರುವ ಪಿಡಿಪಿಯ ಮೊದಲ ಸಭೆಯಲ್ಲಿ ಪಾಲ್ಗೊಳ್ಳಲು ಪಿಡಿಪಿಯ ಹಿರಿಯ ನಾಯಕರಿಗೆ ತಮ್ಮ ನಿವಾಸದಿಂದ ತೆರಳಲು ಗುರುವಾರ ಪೊಲೀಸರು ಅವಕಾಶ ನೀಡಿಲ್ಲ.
ತಮಗೆ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ಸಭೆ ಆರಂಭವಾಗುವುದಕ್ಕಿಂತ ಒಂದು ಗಂಟೆ ಮೊದಲು ತಿಳಿಸಿದರು ಎಂದು ಪಿಡಿಪಿ ನಾಯಕರು ಹೇಳಿದ್ದಾರೆ. ಕಳೆದ ಎಲ್ಲಾ ದಿನಗಳಲ್ಲಿ ನಾವು ಸ್ವತಂತ್ರರು ಎಂದು ಹೇಳಲಾಗಿತ್ತು. ಆದರೆ, ನಾವು ಸಭೆಯಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಗಿಳಿಯಲು ಪ್ರಯತ್ನಿಸಿದಾಗ, ನಮ್ಮನ್ನು ಪೊಲೀಸರು ತಡೆದರು ಎಂದು ಪಿಡಿಪಿಯ ವಕ್ತಾರ ವಾಹಿದುರ್ರಹ್ಮಾನ್ ಪರ್ರಾ ತಿಳಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಲು ಅನುಮತಿ ಕೋರಿ ನಾವು ಕಾಶ್ಮೀರದ ವಿಭಾಗೀಯ ಆಯುಕ್ತ, ಕಾಶ್ಮೀರ ವಲಯದ ಐಜಿಪಿ, ಶ್ರೀನಗರ ಜಿಲ್ಲಾಧಿಕಾರಿಗೆ ಅದಾಗಲೇ ಪತ್ರ ಬರೆದಿದ್ದೆವು. ಆದರೆ, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಪಕ್ಷದ ಹಿರಿಯ ನಾಯಕ ಎ.ಆರ್. ವೀರಿ ತಿಳಿಸಿದ್ದಾರೆ. ಕಾಗದ ಪತ್ರದಲ್ಲಿ ದಾಖಲಿಸಿ, ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಒಪ್ಪಿಗೆ ಸಲ್ಲಿಸಿದ ಹೊರತಾಗಿಯೂ ಯಾವುದೇ ಅಧಿಕೃತ ಆದೇಶ ಇಲ್ಲದೆ ಪಿಡಿಪಿ ನಾಯಕರನ್ನು ಕಾನೂನು ಬಾಹಿರವಾಗಿ ನಿರಂತರ ವಶದಲ್ಲಿ ಇರಿಸಲಾಗಿದೆ ಎಂದು ಪಿಡಿಪಿಯ ಹಿರಿಯ ನಾಯಕ ನಯೀಮ್ ಅಖ್ತರ್ ತಿಳಿಸಿದ್ದಾರೆ.







