ಕೊರೋನ 130 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಕುಂದಿಸಿಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ,ಸೆ.3: ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಭಾರತವು ಬೃಹತ್ ಸವಾಲನ್ನು ಎದುರಿಸುತ್ತಿದೆ,ಆದರೆ ಅದು 130 ಕೋಟಿ ಭಾರತೀಯರ ಮಹತ್ವಾಕಾಂಕ್ಷೆಗಳ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡಿಲ್ಲ ಮತ್ತು ಇದೇ ಕಾರಣದಿಂದ ದೇಶವು ಸದೃಢವಾಗಿ ಮುಂದೆ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ ಹೇಳಿದರು.
ಆ.31ರಿಂದ ಆರಂಭಗೊಂಡಿದ್ದ ಐದು ದಿನಗಳ ಭಾರತ-ಅಮೆರಿಕ ವ್ಯೂಹಾತ್ಮಕ ಪಾಲುದಾರಿಕೆ ವೇದಿಕೆಯ ಮೂರನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನ ಭಾಷಣವನ್ನು ಮಾಡಿದ ಮೋದಿ,ಇತ್ತೀಚಿನ ತಿಂಗಳುಗಳಲ್ಲಿ ದೂರವ್ಯಾಪಿ ಸುಧಾರಣೆಗಳಾಗಿವೆ ಮತ್ತು ಇದರಿಂದಾಗಿ ಉದ್ಯಮ ನಿರ್ವಹಣೆ ಸುಲಭವಾಗುತ್ತಿದೆ ಮತ್ತು ವಿಳಂಬ ನೀತಿ ಕಡಿಮೆಯಾಗುತ್ತಿದೆ ಎಂದರು.
1.3 ಶತಕೋಟಿ ಜನಸಂಖ್ಯೆಯ ಮತ್ತು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಭಾರತವು ವಿಶ್ವದಲ್ಲಿ ಪ್ರತಿ ಮಿಲಿಯನ್‌ಗೆ ಅತ್ಯಂತ ಕಡಿಮೆ ಕೋವಿಡ್ ಸಾವಿನ ದರವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ರೋಗಿಗಳ ಚೇತರಿಕೆ ದರವೂ ಕ್ರಮೇಣ ಹೆಚ್ಚುತ್ತಿದೆ. ಇಂದು ಭಾರತವು ವಿಶ್ವದಲ್ಲಿ ಎರಡನೇ ಬೃಹತ್ ಪಿಪಿಇ ಕಿಟ್ ತಯಾರಿಕೆ ದೇಶವಾಗಿದೆ ಎಂದ ಮೋದಿ,ಕೋವಿಡ್-19ರ ಜೊತೆ ಪ್ರವಾಹಗಳು,ಎರಡು ಚಂಡಮಾರುತಗಳು ಮತ್ತು ಮಿಡತೆಗಳ ದಾಳಿಯ ವಿರುದ್ಧವೂ ನಾವು ಹೋರಾಡಿದ್ದೇವೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರವು ಭಾರತೀಯರಿಗೆ ಅಗತ್ಯ ಬೆಂಬಲವನ್ನು ಒದಗಿಸುತ್ತಿದೆ ಎಂದರು.







