ಚಾರಣಕ್ಕೆ ತೆರಳಿದ್ದ ಮಾಜಿ ಕ್ರಿಕೆಟಿಗ ಶೇಖರ್‌ಗಾವ್ಲಿ ಮೃತ್ಯು

ಮುಂಬೈ, ಸೆ.3: ಮಹಾರಾಷ್ಟ್ರದ ಮಾಜಿ ರಣಜಿ ಟ್ರೋಫಿ ಕ್ರಿಕೆಟ್ ಆಟಗಾರ ಶೇಖರ್ ಗಾವ್ಲಿ ಚಾರಣದ ವೇಳೆ ಕಣಿವೆಗೆ ಬಿದ್ದು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ 23 ವರ್ಷದೊಳಗಿನ ಕ್ರಿಕೆಟ್ ತಂಡದ ಫಿಟ್ನೆಸ್ ಕೋಚ್ ಆಗಿದ್ದ ಗಾವ್ಲಿ ನಾಸಿಕ್‌ನ ಇಗತ್ಪುರಿ ತಾಲೂಕಿನಲ್ಲಿ ಚಾರಣಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರ ಶವ ಪತ್ತೆಯಾಗಿದೆ. ಮರಣೋತ್ತರ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಇಗತ್ಪುರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೇವಲ ಎರಡು ವಾರಗಳ ಹಿಂದೆ ಶೇಖರ್ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಅವರ ಕುಟುಂಬಕ್ಕೆ ಇನ್ನೊಂದು ಆಘಾತ ಉಂಟಾಗಿದೆ.
ಶೇಖರ್ ಕಮರಿಗೆ ಹೇಗೆ ಬಿದ್ದರು ಎನ್ನುವುದು ಸ್ಪಷ್ಟಗೊಂಡಿಲ್ಲ. ಚಾರಣದ ಸಮಯದಲ್ಲಿ ಅವರು ಆಕಸ್ಮಿಕವಾಗಿ ಕಾಲು ಜಾರಿ 200 ಅಡಿ ಆಳದ ಕಣಿವೆಗೆ ಉರುಳಿ ಬಿದ್ದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಬಿದ್ದರೆೆಂದು ಇನ್ನೂ ಕೆಲವರು ಹೇಳುತ್ತಾರೆ. ಈ ಕಾರಣದಿಂದಾಗಿ ಅವರ ಸಾವು ಹೇಗೆ ಸಂಭವಿಸಿತೆಂದು ಸ್ಪಷ್ಟಗೊಂಡಿಲ್ಲ.
ಮಂಗಳವಾರ ತಡರಾತ್ರಿ ನಾಪತ್ತೆಯಾಗಿದ್ದ ಶೇಖರ್‌ಗಾಗಿ ಹುಡುಕಾಟ ಪ್ರಾರಂಭವಾಗಿತ್ತು. ಸ್ಥಳೀಯ ಗ್ರಾಮಸ್ಥರು ಅವರನ್ನು ಹುಡುಕಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದರು. ರಾತ್ರಿಯ ವೇಳೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ. ಬುಧವಾರ ಬೆಳಗ್ಗೆ ಶೋಧ ಪುನರಾರಂಭಗೊಂಡಾಗ ಶೇಖರ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.







