ಈ ವರ್ಷದ ಐಪಿಎಲ್ ನಿಂದ ಹೊರಗುಳಿದ ಮತ್ತೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ

ಹೊಸದಿಲ್ಲಿ, ಸೆ.4: ವೈಯಕ್ತಿಕ ಕಾರಣಕ್ಕೆ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಹೊರಗುಳಿದಿದ್ದಾರೆ. ತನ್ನ ನಿರ್ಧಾರದ ಕುರಿತು ಚೆನ್ನೈ ಸೂಪರ್ ಕಿಂಗ್ಸ್‌ಗೆ(ಸಿಎಸ್‌ಕೆ)ಮಾಹಿತಿ ನೀಡಿರುವುದಾಗಿ ಅವರು ಹೇಳಿದ್ದಾರೆ. ಹರ್ಭಜನ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುತ್ತಿರುವ ಭಾರತದ ಎರಡನೇ ಪ್ರಮುಖ ಆಟಗಾರನಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಿಎಸ್‌ಕೆ ಪರವಾಗಿ ಹರ್ಭಜನ್ ಐಪಿಎಲ್‌ನಲ್ಲಿ ಆಡುತ್ತಿದ್ದರು. 40ರ ಹರೆಯದ ಹರ್ಭಜನ್ ಪ್ರಸ್ತುತ ತನ್ನ ಕುಟುಂಬದೊಂದಿಗೆ ಪಂಜಾಬ್‌ನ ಜಲಂಧರ್‌ನಲ್ಲಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯು ಕೋವಿಡ್-19 ಕಾರಣಕ್ಕೆ ಯುಎಇಗೆ ಸ್ಥಳಾಂತರಗೊಂಡಿದ್ದು, ಸೆಪ್ಟಂಬರ್ 19ರಿಂದ ಆರಂಭವಾಗಲಿದೆ.
‘‘ಈ ವರ್ಷದ ಐಪಿಎಲ್‌ನಿಂದ ಹೊರಗುಳಿಯುತ್ತಿರುವ ನಿರ್ಧಾರದ ಕುರಿತು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ನಾನು ಮಾಹಿತಿ ನೀಡಿದ್ದೇನೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಖಾಸಗಿತನಕ್ಕೆ ಪ್ರತಿಯೊಬ್ಬರು ಗೌರವ ನೀಡುತ್ತಾರೆಂಬ ನಿರೀಕ್ಷೆ ನನಗಿದೆ’’ ಎಂದು ಸುದ್ದಿಸಂಸ್ಥೆ ಪಿಟಿಐಗೆ ಶುಕ್ರವಾರ ಹರ್ಭಜನ್ ತಿಳಿಸಿದ್ದಾರೆ.
ಒಟ್ಟು 150 ವಿಕೆಟ್‌ಗಳನ್ನು ಕಬಳಿಸಿರುವ ಹರ್ಭಜನ್ ಐಪಿಎಲ್ ಇತಿಹಾಸದಲ್ಲಿ ಓರ್ವ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದಾಗಿ ಆಲ್‌ರೌಂಡರ್ ಸುರೇಶ್ ರೈನಾ ಸಿಎಸ್‌ಕೆ ತಂಡದಿಂದ ನಿರ್ಗಮಿಸಿದ್ದರು.







