ಸಂಘಟನೆ, ಕ್ರಿಯಾಶೀಲತೆಯಿಂದ ಗ್ರಾಪಂ ಚುನಾವಣೆ ಎದುರಿಸಿ:ಕೋಟ

ಉಡುಪಿ, ಸೆ.4: ಕೋವಿಡ್-19ರ ಪರಿಣಾಮ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಮುಂಬರುವ ಗ್ರಾಪಂ ಚುನಾವಣೆಗಳನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಸಂಘಟನೆ, ಕ್ರಿಯಾಶೀಲತೆ ಮತ್ತು ಪರಿಣಾಮಕಾರಿ ಚಟುವಟಿಕೆಗಳಿಂದ ಗೆಲುವಿನ ಗುರಿಯತ್ತ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು ಸಚಿವ ಹಾಗೂ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿ ಗಳು, ಮೋರ್ಚಾ-ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯ್ನುದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣ ವಿದ್ದು, ಕಾರ್ಯಕರ್ತರು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ನಿಗದಿತ ಮೀಸಲಾತಿಯಂತೆ ಆಯಾ ವಾರ್ಡ್‌ಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹಾಗೂ ಪರಿಣಾಮಕಾರಿ ಚುನಾವಣಾ ಕಾರ್ಯತಂತ್ರ ರೂಪಿಸುವುದು ಮುಖ್ಯ ಎಂದರು.
‘ಆಯುಷ್ಮಾನ್ ಭಾರತ್’ ಯೋಜನೆಯಡಿ ನೊಂದಾಯಿತ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆ ಸಂಪೂರ್ಣ ಉಚಿತ ವಾಗಿದೆ. ಸಾರ್ವಜನಿಕರು ‘ಆಯುಷ್ಮಾನ್ ಭಾರತ್’ ಯೋಜನೆಯ ನೊಂದಾಯಿತ ಆಸ್ಪತ್ರೆಗಳಲ್ಲೇ ಕೊರೋನಾ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇತ್ತೀಚೆಗೆ ಕೊರೋನಾ ವಿಚಾರವಾಗಿ ಆಧಾರ ರಹಿತ ಆರೋಪಗಳು ಕೇಳಿ ಬರುತ್ತಿವೆ. ಇವೆಲ್ಲವೂ ಸತ್ಯಕ್ಕೆ ದೂರ ವಾಗಿದ್ದು ಜನತೆ ವದಂತಿಗಳಿಗೆ ಕಿವಿಗೊಡ ಬಾರದು ಎಂದವರು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ರಾಜ್ಯ ಮಟ್ಟದ ವಿವಿಧ ಮೋರ್ಚಾಗಳಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿ ಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ- ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಕುತ್ಯಾರು ನವೀನ್ ಶೆಟಿ್ಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು







