ಶಿವಮೊಗ್ಗ: ಆತ್ಮಹತ್ಯೆಗೆ ಮುಂದಾಗಿದ್ದವನ ಮನವೊಲಿಸಿ ರಕ್ಷಿಸಿದ ಪಿಎಸ್ಐ

ಪಿಎಸ್ಐ ತಿರುಮಲೇಶ್
ಶಿವಮೊಗ್ಗ: ಕಟ್ಟಡದ ನಿರ್ಮಾಣದ ಬಿಲ್ ಸೆಟ್ಲ್ ಮಾಡದೆ 9 ತಿಂಗಳವರೆಗೆ ಗುತ್ತಿಗೆದಾರ ಸತಾಯಿಸುತ್ತಿದ್ದ ಎಂದು ಆರೋಪಿಸಿ, ಉಪಗುತ್ತಿಗೆದಾರನೋರ್ವನು ಆತ್ಮಹತ್ಯೆಗೆ ಮುಂದಾಗಿದ್ದ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.
ಗಾಡಿಕೊಪ್ಪದ ಅಪಾರ್ಟ್ ಮೆಂಟ್ ವೊಂದರ ನಿರ್ಮಾಣದ ಗುತ್ತಿಗೆ ಹಿಡಿದ ಗಣೇಶ್ ಎಂಬಾತ ಗೌತಮ್ ಎಂಬ ಉಪ ಗುತ್ತಿಗೆದಾರನಿಗೆ 21 ಲಕ್ಷ ರೂ. ಹಣ ನೀಡದೆ ಕಳೆದ ಒಂಬತ್ತು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಗೌತಮ್ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ವಿಚಾರ ತಿಳಿದ ಸ್ಥಳೀಯರು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಿಎಸ್ಐ ತಿರುಮಲೇಶ್ ಆತ್ಮಹತ್ಯೆಗೆ ಮುಂದಾಗಿದ್ದ ಗೌತಮ್ ನ ಮನವೊಲಿಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುತ್ತಿಗೆದಾರ ಗಣೇಶ್ 21 ಲಕ್ಷ ರೂ. ಮೌಲ್ಯ ದ ಕಟ್ಟಡ ನಿರ್ಮಾಣದ ಸಾಮಗ್ರಿಯನ್ನು ಗೌತಮ್ ಗೆ ನೀಡಿರುವುದಾಗಿ ಹೇಳಿದ್ದಾರೆ. ಗುತ್ತಿಗೆದಾರ ಗಣೇಶ್ ಹಾಗೂ ಆತ್ಮಹತ್ಯೆಗೆ ಮುಂದಾಗಿದ್ದ ಗೌತಮ್ ಇಬ್ಬರ ಬಳಿ ಇರುವ ದಾಖಲೆ ಜೊತೆ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.





