ಬೆಂಗಳೂರು: 2,963 ಹೊಸ ಕೊರೋನ ಪ್ರಕರಣಗಳು ದೃಢ; 25 ಮಂದಿ ಸಾವು

ಬೆಂಗಳೂರು, ಸೆ.4: ರಾಜಧಾನಿಯಲ್ಲಿ ಶುಕ್ರವಾರ 2,963 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 25 ಜನರು ಮೃತಪಟ್ಟಿದ್ದಾರೆ.
ನಗರದಲ್ಲಿ ಏರಿಕೆ ಕಂಡಿದ್ದ ಗುಣಮುಖರಾಗುತ್ತಿದ್ದವರ ಸಂಖ್ಯೆಯಲ್ಲಿ ಶುಕ್ರವಾರ ತುಸು ಇಳಿಕೆ ಕಂಡಿದ್ದು, 1732 ಜನರು ಇಂದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೂ 1,41,664 ಜನರಿಗೆ ಕೊರೋನ ಸೋಂಕು ತಗಲಿದ್ದು, ಈ ಪೈಕಿ 97,926 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 2091 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ನಗರದಲ್ಲಿ 41,646 ಸಕ್ರಿಯ ಪ್ರಕರಣಗಳಿವೆ ಹಾಗೂ 276 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯಗಳಲ್ಲಿ ಶುಕ್ರವಾರ 4,113 ಸೇರಿದಂತೆ ಇದುವರೆಗೂ 1,87,750 ಜನರಿಗೆ ಜ್ವರ ತಪಾಸಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮನೆಗಳ ನಡುವಿನ ಅಂತರ ಹಾಗೂ ಒಂದು ಪ್ರದೇಶದಲ್ಲಿ ಹೆಚ್ಚಿನ ಜನಸಾಂದ್ರತೆ ಕಾರಣದಿಂದಾಗಿ ಸೋಂಕು ಅಧಿಕ ಪ್ರಮಾಣದಲ್ಲಿ ಹರಡುತ್ತಿದೆ. ಲಾಕ್‍ಡೌನ್ ಸೇರಿದಂತೆ ಇತರೆ ಕ್ರಮಗಳಿಂದಾಗಿ ಸೋಂಕಿನ ದರ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಸೋಂಕು ಹೆಚ್ಚಿರುವ ಕಂಟೈನ್ಮೆಂಟ್ ವಲಯಗಳು ಅಧಿಕಗೊಂಡಿವೆ.







