ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಅಧ್ಯಕ್ಷ ಕೆ.ರಾಮಕೃಷ್ಣ ಬಂಧಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಆ.4: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಕ್ರೆಡಿಟ್ ಸೊಸೈಟಿ ಹಗರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಅಧ್ಯಕ್ಷ ಕೆ. ರಾಮಕೃಷ್ಣ ಅವರನ್ನು ಬಂಧಿಸಲು ಶೀಘ್ರ ಕ್ರಮ ಜರುಗಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಹಗರಣದ ತನಿಖೆ ಕೋರಿ ಕೆ. ಆರ್.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸರಕಾರಕ್ಕೆ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರಕಾರದ ಪರ ವಕೀಲರು ತನಿಖೆಯ ಪ್ರಗತಿ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ಪೀಠ, ಪ್ರಕರಣದ ಪ್ರಮುಖ ಆರೋಪಿಯಾದ ಕೆ. ರಾಮಮಕೃಷ್ಣ ಅವರನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಆರೋಪಿ ಬಂಧಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿತು.
ಬ್ಯಾಂಕ್ ಪರ ವಾದಿಸಿದ ವಕೀಲರು ಅಧ್ಯಕ್ಷ ರಾಮಕೃಷ್ಣ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಿದ್ದೂ ಪೊಲೀಸರ ಕಾಲ್ ಡಿಟೇಲ್ ರಿಜಿಸ್ಟರ್(ಸಿಡಿಐರ್) ಮಾಹಿತಿಯಂತೆ ರಾಣೆಬೆನ್ನೂರಿನಲ್ಲಿ ಮೂರು ದಿನಗಳ ಹಿಂದೆ ಇದ್ದುದು ಪತ್ತೆಯಾಗಿದೆ. ಅವರು ಯಾವುದೇ ರಾಜಕೀಯ ಪ್ರಭಾವವನ್ನು ಹೊಂದಿಲ್ಲ. ಈ ವಿಚಾರಗಳನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ಅವರು ವಾದಿಸಿ, ಸರಕಾರ ನೇಮಿಸಿರುವ ಬ್ಯಾಂಕ್‍ನ ಆಡಳಿತಾಧಿಕಾರಿ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರಾದರೂ, ಅವರಿಗೆ ಬೇರೆ ಇಲಾಖೆಯ ಹೆಚ್ಚುವರಿ ಹೊಣೆಗಾರಿಕೆ ಇರುವುದರಿಂದ ದಿನಕ್ಕೆ ಒಂದೆರಡು ಗಂಟೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬ್ಯಾಂಕಿಂಗ್ ರೆಗ್ಯೂಲೇಷನ್ ಆ್ಯಕ್ಟ್‍ನ ಸೆಕ್ಷನ್ 35 ಎಬಿ ಅಡಿ ಪ್ರಾಧಿಕಾರ ನೇಮಿಸಬೇಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಪೊಲೀಸರು ಶೀಘ್ರವಾಗಿ ಆರೋಪಿ ಬಂಧಿಸಲು ಕ್ರಮ ಜರುಗಿಸಬೇಕು. ಈ ಕುರಿತು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಇನ್ನು ಬ್ಯಾಂಕ್‍ನ ಸಾಲಗಾರರು ಹಣ ಹಿಂದಿರುಗಿ ಪಾವತಿಸಲು ಆಡಳಿತಾಧಿಕಾರಿ ಅಗತ್ಯ ಸೂಚನೆ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿತು.







