ಸ್ಕೂಟರ್ನಲ್ಲಿ 1,300 ಕಿ. ಮೀ. ಕ್ರಮಿಸಿ ಗರ್ಭಿಣಿ ಪತ್ನಿಯನ್ನು ಪರೀಕ್ಷೆ ಕೇಂದ್ರಕ್ಕೆ ಕರೆ ತಂದ ಪತಿ !

Photo: timesofindia
ಗ್ವಾಲಿಯರ್, ಸೆ. 4: ಡಿ.ಇಐ.ಇಡಿ ಪರೀಕ್ಷೆ ಬರೆಯಲಿದ್ದ ತನ್ನ ಗರ್ಭಿಣಿ ಪತ್ನಿಯನ್ನು ಪತಿಯೋರ್ವ 1,300 ಕಿ.ಮೀ. ದೂರ ಸ್ಕೂಟರ್ನಲ್ಲಿ ಕ್ರಮಿಸಿ ಪರೀಕ್ಷಾ ಕೇಂದ್ರಕ್ಕೆ ಕರೆ ತಂದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಿಂದ ವರದಿಯಾಗಿದೆ.
ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಿಂದ ಸ್ಕೂಟರ್ನಲ್ಲಿ ಗ್ವಾಲಿಯರ್ಗೆ ತಲುಪಲು ಧನಂಜಯ ಕುಮಾರ್ ಮಾಂಝಿ 3 ದಿನ ತೆಗೆದುಕೊಂಡಿದ್ದಾರೆ. ಜಾರ್ಖಂಡ್ನ ಗೊಡ್ಡಾ ಜಿಲ್ಲೆಯ ಗಂಟ ತೋಲಾ ಗ್ರಾಮದಲ್ಲಿ ಧನಂಜಯ ಕುಮಾರ್ ಮಾಂಝಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಸೋನಿ ಹೆಂಬ್ರಾಮನ್ ಅವರು ಗ್ವಾಲಿಯರ್ನಲ್ಲಿ ಡಿಆಐ ಇಡಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಸರಿಯಾದ ವಾಹನ ಸೌಕರ್ಯ ಇಲ್ಲದೇ ಇದ್ದುದರಿಂದ ಮಾಂಝಿ ಜಾರ್ಖಂಡ್, ಬಿಹಾರ್ ಹಾಗೂ ಉತ್ತರ ಪ್ರದೇಶದ ಕಠಿಣ ಭೂಪ್ರದೇಶಗಳ ಮೂಲಕ 1,300 ಕಿ.ಮೀ. ಸ್ಕೂಟರ್ನಲ್ಲಿ ಕ್ರಮಿಸಿ ತನ್ನ ಪತ್ನಿಯೊಂದಿಗೆ ಗ್ವಾಲಿಯರ್ಗೆ ತಲುಪಿದ್ದರು.
ಅವರ ಪ್ರಯಾಣ ಸುಲಲಿತವಾಗಿ ಏನೂ ಇರಲಿಲ್ಲ. ಪ್ರಯಾಣದ ಸಂದರ್ಭ ಭಾರೀ ಮಳೆ ಸುರಿದಾಗ ಎರಡು ಗಂಟೆಗಳ ಕಾಲ ಮರವೊಂದರ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಬಿಹಾರದ ಬಾಗಲ್ಪುರದಲ್ಲಿ ಅವರು ನೆರೆಯನ್ನು ಕೂಡ ಎದುರಿಸಬೇಕಾಯಿತು. ನತದೃಷ್ಟ ದಂಪತಿ ಮುಝಪ್ಫರ್ಪುರದಲ್ಲಿ ವಸತಿಗೃಹದಲ್ಲಿ ವಾಸ್ತವ್ಯ ಕೋರಿದ್ದರು. ಆದರೆ, ಅದು ಸಾಧ್ಯವಾಗದೆ ಲಕ್ನೋದ ಟೋಲ್ ಪ್ಲಾಜಾದಲ್ಲಿ ಆಶ್ರಯ ಪಡೆದಿದ್ದರು. ಕೇವಲ 8ನೇ ತರಗತಿ ಓದಿರುವ ಮಾಂಝಿಗೆ ತನ್ನ ಪತ್ನಿ ಅಧ್ಯಾಪಕಿ ಆಗಲೇಬೇಕು ಎಂಬ ಆಸೆ ಸ್ಕೂಟರ್ನಲ್ಲಿ ಗ್ವಾಲಿಯರ್ನ ಪರೀಕ್ಷಾ ಕೇಂದ್ರದ ವರೆಗೆ ಬರಲು ಪ್ರೇರೇಪಣೆ ನೀಡಿದೆ.







