ಗ್ರಾಮ ಪಂಚಾಯತ್ ಚುನಾವಣೆ ನಿರ್ವಹಣೆಗೆ ಸುತ್ತೋಲೆ ಹೊರಡಿಸಿದ ಚುನಾವಣಾ ಆಯೋಗ

ಬೆಂಗಳೂರು, ಸೆ.4: ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಅನುಸರಿಸಬೇಕಾದ ನಿಯಮಾವಳಿ ಮತ್ತು ನಿರ್ವಹಣಾ ಪದ್ಧತಿಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದ್ದು, ಕೋವಿಡ್ ಪಾಸಿಟಿವ್ ಇದ್ದವರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ನಾಮಪತ್ರ ಸ್ವೀಕಾರ, ನಾಮಪತ್ರ ಪರಿಶೀಲನೆ, ಚಿಹ್ನೆಗಳ ಹಂಚಿಕೆ ಸೇರಿ ಎಲ್ಲದರಲ್ಲೂ ಕೋವಿಡ್ ಹರಡುವಿಕೆ ತಡೆಯುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಚುನಾವಣಾ ತರಬೇತಿಗಳನ್ನು ಒಂದೇ ಜಾಗದಲ್ಲಿ ಮಾಡದೆ, ಕಡಿಮೆ ಜನರಿರುವಂತೆ ಬೇರೆ ಬೇರೆ ಸ್ಥಳಗಳಲ್ಲಿ ನಡೆಸಲು ಸೂಚಿಸಲಾಗಿದೆ. ತರಬೇತಿಗೆ ವಿಡಿಯೋ, ಆನ್‍ಲೈನ್, ಪವರ್ ಪಾಯಿಂಟ್, ವೆಬಿನಾರ್ ಆಪ್ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಪ್ರಚಾರಕ್ಕೆ ಐವರು: ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕರ ಸಂಖ್ಯೆ 5ಕ್ಕೆ ಸೀಮಿತ ಮಾಡಲಾಗಿದೆ. ಪ್ರಚಾರದಲ್ಲಿ ಭಾಗವಹಿಸುವವರು ಫೇಸ್‍ಶೀಲ್ಡ್, ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ. ಕರಪತ್ರ ಹಂಚುವುದಕ್ಕೆ, ಸುರಕ್ಷಿತ ಅಂತರ ಕಾಪಾಡಿಕೊಂಡು ಪ್ರಚಾರ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರಚಾರಕ್ಕೆ ಆದಷ್ಟೂ ಎಲೆಕ್ಟ್ರಾನಿಕ್ ಮಾಧ್ಯಮ ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಕೋವಿಡ್ ಪಾಸಿಟಿವ್ ಇದ್ದ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದರೆ, ಅವರಿಗೆ ಅವಕಾಶ ನಿರಾಕರಿಸುವಂತಿಲ್ಲ. ಸೂಚಕರ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಪಾಸಿಟಿವ್ ಮತದಾರರಿದ್ದರೆ ಅವರೂ ಮತದಾನ ಪ್ರಕ್ರಿಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆಸ್ಪತ್ರೆ-ಮನೆಯಿಂದಲೇ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸುವುದಾಗಿ ಆಯೋಗ ತಿಳಿಸಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಿದೆ.







