ಕಾಶ್ಮೀರಿ ಶಾಲಾ ಶಿಕ್ಷಕಿಗೆ ಒಲಿದ ರಾಷ್ಟ್ರೀಯ ಪ್ರಶಸ್ತಿ
ನಾಳೆ ರಾಷ್ಟ್ರಪತಿಗಳಿಂದ ಪ್ರದಾನ

ಹೊಸದಿಲ್ಲಿ,ಸೆ.4: ಶಿಕ್ಷಕರ ದಿನವಾದ ಶನಿವಾರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗಳನ್ನು ಸ್ವೀಕರಿಸಲಿರುವ 47 ಜನರಲ್ಲಿ ಕಾಶ್ಮೀರಿ ಶಾಲಾ ಶಿಕ್ಷಕಿ ರೂಹಿ ಸುಲ್ತಾನಾ ಸೇರಿದ್ದಾರೆ.
ಶ್ರೀನಗರದ ಹೊರವಲಯದಲ್ಲಿರುವ ಗುಲಾಬ್ ಬಾಗ್ ಪ್ರದೇಶದ ಕಾಶಿಪೋರಾದಲ್ಲಿನ ಬಾಯ್ಸ್ ಮಿಡ್ಲ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿರುವ ಸುಲ್ತಾನಾರನ್ನು ಬೋಧನೆಯಲ್ಲಿ ರಚನಾತ್ಮಕತೆ ಮತ್ತು ವಿನೂತನತೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು ಪ್ರತಿವರ್ಷ ಈ ಪ್ರಶಸ್ತಿಗಳನ್ನು ನೀಡುತ್ತದೆ. ಕೋವಿಡ್-19 ಬಿಕ್ಕಟ್ಟಿನ ಹಿನ್ನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವರ್ಚ್ಯುವಲ್ ವಿಧಾನದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ.
ಶಾಲಾ ತರಗತಿಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ವ್ಯತ್ಯಯವುಂಟಾಗಿದ್ದ ಸವಾಲಿನ ಸಂದರ್ಭಗಳಲ್ಲಿಯೂ ಪ್ರಾಥಮಿಕ ತರಗತಿಗಳಲ್ಲಿನ ತನ್ನ ವಿದ್ಯಾರ್ಥಿಗಳು ಕಲಿಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಸುಲ್ತಾನಾರ ಪ್ರಯತ್ನಗಳ ಪಾಲು ಮುಖ್ಯವಾಗಿತ್ತು ಎಂದು ಶಿಕ್ಷಣ ಸಚಿವಾಲಯವು ಪ್ರಶಂಸಿಸಿದೆ.
ವಿಶೇಷ ಸಾಮರ್ಥ್ಯದ ಮಕ್ಕಳು ಶಿಕ್ಷಣದ ಲಾಭಗಳಿಂದ ವಂಚಿತರಾಗದಂತೆ ಅವರನ್ನೂ ಸೇರ್ಪಡೆಗೊಳಿಸುವಲ್ಲಿ ಸುಲ್ತಾನರ ಕಠಿಣ ಪರಿಶ್ರಮವನ್ನೂ ಸಚಿವಾಲಯವು ಗುರುತಿಸಿದೆ.







