ಸೆ.14ರಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ 2,700 ಕಿಮೀ ಸೈಕಲ್ ಯಾತ್ರೆ
ಬೆಂಗಳೂರು, ಸೆ.4: ರಾಜ್ಯದ ಜನತೆ ಜನಪರ ರಾಜಕಾರಣದ ಅವಶ್ಯಕತೆ ಬಗ್ಗೆ ತಿಳಿಸಲು ಮತ್ತು ಅವರ ಕಷ್ಟ-ಕಾರ್ಪಣ್ಯಗಳನ್ನು ಅರಿಯಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ಚಲಿಸುವ ಕರ್ನಾಟಕ ಹೆಸರಿನಲ್ಲಿ 2,700 ಕೀಮಿ ಸೈಕಲ್ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಷ್ಟ್ರ ಪಕ್ಷ ಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಸೈಕಲ್ ಯಾತ್ರೆ ಮಾಡಲಾಗುತ್ತಿದೆ. ಈ ಯಾತ್ರೆಯ ಮೂಲಕ ನಾಡಿನ ನೆಲ, ಜಲ ಹಾಗೂ ಭಾಷೆಯ ರಕ್ಷಣೆ ಮಾಡಲು ಹಾಗೂ ಜನತೆಯನ್ನು ರಾಜ್ಯದ ಉಜ್ವಲ ಭವಿಷ್ಯದೆಡೆಗೆ ಚಲಿಸುವಂತೆ ಪ್ರೇರೇಪಿಸುವ ಉದ್ದೇಶ ಹೊಂದಿದ್ದೇವೆಂದು ತಿಳಿಸಿದರು.
ಚಲಿಸು ಕರ್ನಾಟಕ ಸೈಕಲ್ ಯಾತ್ರೆಯು ಮೂರು ಹಂತಗಳಲ್ಲಿ ಯೋಜಿಸಿದ್ದು, ಸೆಪ್ಟಂಬರ್, ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ನಡೆಯಲಿದೆ. ಮೊದಲ ಹಂತದ 15ದಿನಗಳ ಯಾತ್ರೆಯು ಸೆ.14ರಂದು ಕೋಲಾರದಲ್ಲಿ ಆರಂಭವಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂ.ನಗರ. ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗಿ ತುಮಕೂರಿನ ಶಿರಾದಲ್ಲಿ ಮುಕ್ತವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಎರಡನೇ ಹಂತದ ಚಲಿಸು ಕರ್ನಾಟಕ ಯಾತ್ರೆಯು ಅ.5ರಿಂದ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನಡೆಯುತ್ತದೆ. ಮತ್ತು ನವೆಂಬರ್‍ನಲ್ಲಿ ಮೂರನೇ ಹಂತದ ಯಾತ್ರೆಯು ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಾಗಲಿದೆ. ಈ ಯಾತ್ರೆಯಲ್ಲಿ ಕೋವಿಡ್-19ರ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಅವರು ಹೇಳಿದರು.
ರಾಜ್ಯದ ಎಲ್ಲ ಭಾಗಗಳ ಕಾರ್ಯಕರ್ತರು ಈ ಯಾತ್ರೆಯಲ್ಲಿ ಭಾಗವಹಿಸಲು ತಮ್ಮ ಹೆಸರನ್ನು http://www.krsparty.org/registration/cycle.php ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.79756-25575ಕ್ಕೆ ಸಂಪರ್ಕಿಸಲು ಅವರು ತಿಳಿಸಲಾಗಿದೆ.







