ನಮ್ಮ ಭೂಪ್ರದೇಶದ ಒಂದು ಇಂಚನ್ನೂ ಕಳೆದುಕೊಳ್ಳಲು ಸಿದ್ಧವಿಲ್ಲ: ರಾಜನಾಥ ಸಿಂಗ್ ಮಾತುಕತೆ ಬಳಿಕ ಚೀನಾ

ಹೊಸದಿಲ್ಲಿ, ಸೆ.5: ತನ್ನ ಭೂಪ್ರದೇಶದ ಒಂದು ಇಂಚು ಪ್ರದೇಶವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ ಎಂದಿರುವ ಚೀನಾ ಸರಕಾರ ಲಡಾಖ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಗಡಿ ಬಿಕ್ಕಟ್ಟಿಗೆ ಭಾರತವೇ ಸಂಪೂರ್ಣ ಕಾರಣವಾಗಿದೆ ಎಂದು ಆರೋಪಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಚೀನಾದ ರಕ್ಷಣಾ ಸಚಿವ ವೀ ಫೆಂಗಿ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ ಕೆಲವೇ ಕ್ಷಣದಲ್ಲಿ ಚೀನಾ ಸರಕಾರ ಈ ಹೇಳಿಕೆ ನೀಡಿದೆ. ಚೀನಾ ತನ್ನ ಭೂಪ್ರದೇಶದ ಒಂದು ಇಂಚು ಕಳೆದುಕೊಳ್ಳುವುದಿಲ್ಲ ಹಾಗೂ ರಾಷ್ಟ್ರೀಯ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ತನ್ನ ಪಡೆಗಳು ದೃಢ ನಿಶ್ಚಯ, ಸಮರ್ಥ ಹಾಗೂ ವಿಶ್ವಾಸ ಹೊಂದಿದೆ ಎಂದಿದೆ.
ಚೀನಾ-ಭಾರತ ಗಡಿಯಲ್ಲಿನ ಉದ್ವಿಗ್ನತೆಗೆ ಕಾರಣಗಳು ಹಾಗೂ ಸತ್ಯವು ಸ್ಪಷ್ಟವಾಗಿದೆ. ಜವಾಬ್ದಾರಿ ಸಂಪೂರ್ಣವಾಗಿ ಭಾರತದ ಮೇಲಿದೆ. ಚೀನಾ ತನ್ನ ಭೂಪ್ರದೇಶದ ಒಂದು ಇಂಚು ಕಳೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಅದರ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ನಿರ್ಧರಿಸಲ್ಪಡುತ್ತದೆ ಎಂದು ಹೇಳಿದೆ.
ಮೇ ತಿಂಗಳಲ್ಲಿ ಎಲ್‌ಎಸಿಯಲ್ಲಿ ಉದ್ವಿಗ್ನತೆ ನೆಲೆಸಿದ ಬಳಿಕ ಇದೇ ಮೊದಲ ಬಾರಿ ಮೂರು ದಿನಗಳ ಶೃಂಗ ಸಭೆಯಲ್ಲಿ ರಾಜನಾಥ ಸಿಂಗ್ ಅವರು ಚೀನಾದ ರಕ್ಷಣಾ ಸಚಿವರನ್ನು ಭೇಟಿಯಾದರು.
ಸಭೆಯ ಮೊದಲು ಮಾತನಾಡಿದ ಸಿಂಗ್, ಈ ಪ್ರದೇಶದಲ್ಲಿ ಶಾಂತಿ ಹಾಗೂ ಸುರಕ್ಷತೆಯ ನಂಬಿಕೆಯ ವಾತಾವರಣ, ಆಕ್ರಮಣಶೀಲತೆ, ಭಿನ್ನಾಭಿಪ್ರಾಯಗಳ ಶಾಂತಿಯುತ ಪರಿಹಾರ ಹಾಗೂ ಅಂತರ್‌ರಾಷ್ಟ್ರೀಯ ನಿಯಮಗಳಿಗೆ ಗೌರವ ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.







