ಫ್ರಾನ್ಸ್ ಪ್ರವಾಸದಲ್ಲಿ ತನ್ನ ಜೊತೆಗಿದ್ದ ಪತ್ನಿಗೆ `ಮನೆಗೆ' ಫೋನ್ ಮಾಡಿ ಮಾತನಾಡಿದ್ದೆ ಎಂದ ಟ್ರಂಪ್!
ಸುಳ್ಳು ಹೇಳಿ ಸಿಕ್ಕಿ ಬಿದ್ದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಫ್ರಾನ್ಸ್ ದೇಶಕ್ಕೆ 2018ರಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭ ಅಲ್ಲಿನ ಮೊದಲನೇ ಜಾಗತಿಕ ಮಹಾಯುದ್ಧದ ಸ್ಮಾರಕಕ್ಕೆ ಭೇಟಿ ನೀಡಬೇಕಿದ್ದ ಟ್ರಂಪ್ ಅದರಿಂದ ತಪ್ಪಿಸಿಕೊಂಡಿದ್ದರು. ಅವರು ತಮ್ಮ ಕೂದಲಿನ ಬಗ್ಗೆ ಹೊಂದಿದ್ದ ಭಯ ಹಾಗೂ ಆ ಸ್ಮಾರಕದಲ್ಲಿ (ದಫನಭೂಮಿ) ‘ಸೋತವರೇ ತುಂಬಿದ್ದರು’ ಎಂಬುದೇ ಇದಕ್ಕೆ ಕಾರಣವಾಗಿತ್ತೆಂಬ ವರದಿಗಳನ್ನು ಟ್ರಂಪ್ ನಿರಾಕರಿಸುತ್ತಲೇ ಬಂದಿದ್ದಾರೆ. ಈ ನಡುವೆ ಇದೇ ವಿಚಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್, ಆ ಸಂದರ್ಭ ತಾನು ಮನೆಗೆ ಕರೆ ಮಾಡಿ ಮೆಲಾನಿಯಾ ಟ್ರಂಪ್ ಜತೆ ಮಾತನಾಡಿ ಆ ಸ್ಮಾರಕಕ್ಕೆ ಹೋಗಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಿದೆ ಎಂದು ವಿವರಿಸಿದ್ದಾಗಿ ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಅಧ್ಯಕ್ಷರ ಭೇಟಿಯನ್ನು ರದ್ದುಗೊಳಿಸಬೇಕಾಗಿ ಬಂದಿತ್ತು ಎಂದು ಆ ಸಂದರ್ಭ ಶ್ವೇತಭವನದ ಹೇಳಿಕೆ ತಿಳಿಸಿತ್ತು.
ಟ್ರಂಪ್ ಪ್ರಕಾರ ಅವರು ಮನೆಗೆ ಕರೆ ಮಾಡಿ ಪತ್ನಿಯ ಜತೆ ಮಾತನಾಡಿ, “ನಾನು ಇಲ್ಲಿಗೆ ಆ ಸಮಾರಂಭಕ್ಕೆ ಹೋಗಲು ಬಂದಿದ್ದು. ಹಾಗೂ ನಂತರದ ದಿನದ ಸಮಾರಂಭಕ್ಕೆ ನಾನು ಹೋಗಿದ್ದೆ. ನನಗೆ ಬೇಸರವಾಗಿತ್ತು ಎಂದು ಹೇಳಿದೆ. ಅಷ್ಟೇ'' ಎಂದರು.
ವಾಸ್ತವವೇನು ?
ವಾಸ್ತವವಾಗಿ ಮೆಲಾನಿಯಾ ಆ ಪ್ರವಾಸದ ವೇಳೆ ಟ್ರಂಪ್ ಜತೆಗಿದ್ದರಲ್ಲದೆ ಆಕೆಯೂ ಸ್ಮಾರಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆಕೆಯ ಕಚೇರಿಯಿಂದ ಆ ಸಂದರ್ಭ ಹೊರಡಿಸಲಾದ ಹೇಳಿಕೆಯಲ್ಲಿ ``ಪ್ರತಿಕೂಲ ಹವಾಮಾನದಿಂದಾಗಿ ಪ್ರಥಮ ಮಹಿಳೆ ಮತ್ತು ಟ್ರಂಪ್ ಅವರು ಫ್ರಾನ್ಸ್ ನ ಬೆಲ್ಲಾವು ಎಂಬಲ್ಲಿರುವ ಏಸ್ನೆ-ಮರ್ನ ಅಮೆರಿಕನ್ ಸಿಮೆಟ್ರಿ ಹಾಗೂ ಸ್ಮಾರಕಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ'' ಎಂದು ತಿಳಿಸಲಾಗಿತ್ತು.
ಆದರೆ ಈ ಭೇಟಿಯನ್ನು ಟ್ರಂಪ್ ರದ್ದುಪಡಿಸಿದಾಗ ಅದು ಪ್ರತಿಕೂಲ ಪರಿಣಾಮ ಬೀರಬಹುದೆಂದು ಆಗ ಯಾರೂ ಅವರನ್ನು ಎಚ್ಚರಿಸಿರಲಿಲ್ಲ. ಆ ಕಾರ್ಯಕ್ರಮದಲ್ಲಿ ಟ್ರಂಪ್ ಅವರ ಬದಲು ಅವರ ಸಮೀಪವರ್ತಿ ಜಾನ್ ಕೆಲ್ಲಿ ಭಾಗವಹಿಸಿದ್ದರು. ಆ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಭೇಟಿ ನೀಡಲು ಸಾಧ್ಯವಿಲ್ಲ ಹಾಗೂ ರಸ್ತೆಯಲ್ಲಿಯೇ ಸಾಗಬೇಕೆಂದು ತಿಳಿಸಲಾದ ನಂತರ ಟ್ರಂಪ್ ಭೇಟಿ ನೀಡದೇ ಇರಲು ನಿರ್ಧರಿಸಿದ್ದರು. ಆ ಅಪರಾಹ್ನ ಅವರು ಅಲ್ಲಿನ ಅಮೆರಿಕ ರಾಯಭಾರಿಯ ನಿವಾಸದಲ್ಲಿ ಟಿವಿ ನೋಡುತ್ತಾ ಸಮಯ ಕಳೆದಿದ್ದರು ಎಂದು ಮೂಲಗಳು ತಿಳಿಸಿವೆ.







