ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ 23 ಲಕ್ಷ ಹುದ್ದೆಗಳ ಭರ್ತಿಗೆ ಒತ್ತಾಯ
ಬೆಂಗಳೂರು, ಸೆ. 5: ದೇಶದಾದ್ಯಂತ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ 23 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಅಲ್ಲದೆ, ಎನ್‍ಆರ್‍ಎ(ರಾಷ್ಟ್ರೀಯ ನೇಮಕಾತಿ ಸಂಸ್ಥೆ)ಯ ಯುವ ವಿರೋಧಿ ನೀತಿ ವಿರುದ್ಧ, ನಿರುದ್ಯೋಗದ ವಿರುದ್ಧ ದೇಶಾದ್ಯಂತ ಪ್ರಬಲ ಯುವ ಚಳವಳಿಯನ್ನು ನಿರ್ಮಿಸಲು ಯುವ ಸಮುದಾಯದ ಮುಂದೆ ಬರಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯುತ್ ಆರ್ಗನೈಸೇಷನ್ (ಎಐಡಿವೈಓ) ಮನವಿ ಮಾಡಿದೆ.
ಶನಿವಾರ ರಾಜ್ಯ ಸಮಿತಿಯ ಕೃಷ್ಣ ಪ್ರಕಟಣೆ ನೀಡಿದ್ದು, ಮಧ್ಯಪ್ರದೇಶದ ಬಿಜೆಪಿ ಸರಕಾರವು ಭೋಪಾಲ್‍ನಲ್ಲಿ ಸೆ.4ರಂದು ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಲಾಠಿ ಪ್ರಹಾರ ಮಾಡಿದೆ. ಇದು ಬಿಜೆಪಿಯು ಸರಕಾರ ನಡೆಸುತ್ತಿರುವ ವಿವಿಧ ರಾಜ್ಯಗಳಲ್ಲಿನ ತನ್ನ ನಿರಂಕುಶಾಧಿಕಾರಿ ವರ್ತನೆಗೆ ಮತ್ತು ಜನರ ಜೀವನದ ಜ್ವಲಂತ ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರುತ್ತಿರುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದು ಟೀಕಿಸಿದ್ದಾರೆ.
ಕ್ರೂರ ಲಾಠಿಚಾರ್ಜ್‍ಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರತಿಭಟನಾಕಾರರ ವಿರುದ್ಧ ಮಾಡಿರುವ ಎಲ್ಲ ಸುಳ್ಳು ಆರೋಪಗಳನ್ನು ಕೂಡಲೇ ಹಿಂಪಡೆಯಬೇಕು. ಯುವ ಪ್ರತಿಭಟನಾಕಾರರ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಎಸ್‍ಎಸ್‍ಸಿ, ಶಿಕ್ಷಕರು, ರೈಲ್ವೆ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳ ಫಲಿತಾಂಶಗಳನ್ನು ತಕ್ಷಣ ಪ್ರಕಟಿಸಿ. ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ ದೇಶವ್ಯಾಪಿ ಯುವಜನರಿಗೆ ಉದ್ಯೋಗವನ್ನು ಖಾತ್ರಿಪಡಿಸಬೇಕು ಎಂದರು.
ಕೋವಿಡ್-19ರ ಪರಿಣಾಮವಾಗಿ ದೇಶದಾದ್ಯಂತ 2.7ಲಕ್ಷ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ ಮತ್ತು 12 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಹೀಗಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಎಸ್‍ಎಸ್‍ಸಿ, ರೈಲ್ವೆ, ಶಿಕ್ಷಕರು ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸುವ ಬದಲು, ಸಾಮಾನ್ಯ ಜನರು ಮತ್ತು ಯುವಕರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ನಿರತವಾಗಿದೆ. ಮಧ್ಯಪ್ರದೇಶದ ವಿವಿಧ ಜಿಲ್ಲೆಗಳ 1500 ಕ್ಕೂ ಹೆಚ್ಚು ಯುವಕರು ತಮ್ಮ ಜಿಲ್ಲೆಗಳಲ್ಲಿ ನಿರಂತರ ಹಲವಾರು ಪ್ರತಿಭಟನೆಗಳ ನಂತರ ಭೋಪಾಲ್‍ನಲ್ಲಿ ನಿನ್ನೆ ಸಭೆ ಸೇರಿದ್ದರು.
ಈ ಹೋರಾಟದ ನಾಯಕತ್ವ ವಹಿಸಿದ್ದ ಎಐಡಿವೈಓ ಮಧ್ಯಪ್ರದೇಶ ರಾಜ್ಯ ಕಾರ್ಯದರ್ಶಿ ಪ್ರಮೋದ್ ನಾಮದೇವ್ ಅವರೊಂದಿಗೆ ನೂರಾರು ಯುವಜನರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಯುವಕರ ಶಾಂತಿಯುತ ಪ್ರತಿಭಟನೆಯ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯುತ್ ಆರ್ಗನೈಸೇಷನ್ (ಎಐಡಿವೈಓ) ಅಖಿಲ ಭಾರತ ಸಮಿತಿಯು ಸೆ.5ರಂದು ಅಖಿಲ ಭಾರತ ಪ್ರತಿಭಟನಾ
ದಿನವನ್ನು ಘೋಷಿಸಿದೆ. ಈ ಕೆಳಗಿನ ಬೇಡಿಕೆಗಳೊಂದಿಗೆ ದೇಶವ್ಯಾಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಯಶಸ್ವಿ ಪ್ರತಿಭಟನೆಗಳು ನಡೆದಿವೆ ಎಂದು ತಿಳಿಸಿದ್ದಾರೆ.







