ಭಾರತೀಯ ಅಮೆರಿಕನ್ನರು ನನಗೆ ಮತ ನೀಡಲಿದ್ದಾರೆ: ಟ್ರಂಪ್

ವಾಶಿಂಗ್ಟನ್,ಸೆ.5: ಮುಂಬರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ ಭಾರತೀಯ ಅಮೆರಿಕನ್ ಸಮುದಾಯವು ತನ್ನನ್ನು ಬೆಂಬಲಿಸಲಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ವಾಶಿಂಗ್ಟನ್ ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರನ್ನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ತಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಟ್ರಂಪ್, ‘‘ಹಾಗೆಂದು ಭಾವಿಸುತ್ತೇನೆ. ಕಳೆದ ವರ್ಷ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ತಾನು ಪಾಲ್ಗೊಂಡಿದ್ದ ಹ್ಯೂಸ್ಟನ್ ಸಮಾವೇಶವು ಅದ್ಭುತವಾಗಿತ್ತು. ನಮಗೆ ಭಾರತ ಹಾಗೂ ಪ್ರಧಾನಿ ಮೋದಿಯ ಬೆಂಬಲವಿದೆ. ಹೀಗಾಗಿ ಭಾರತೀಯ ಮೂಲದ ಅಮೆರಿಕನ್ನರು ಟ್ರಂಪ್‌ಗೆ ಮತ ಚಲಾಯಿಸಲಿದ್ದಾರೆ’’ ಎಂದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ನಾಯಕ ಹಾಗೂ ಶ್ರೇಷ್ಠ ವ್ಯಕ್ತಿ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು. ‘‘ಪ್ರಧಾನಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ ಮತ್ತವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ’’ ಎಂದರು.
ಈ ವರ್ಷದ ಫೆಬ್ರವರಿಯಲ್ಲಿ ಪತ್ನಿ ಮೆಲನಿಯಾ ಜೊತೆ ತನ್ನ ಎರಡು ದಿನಗಳ ಭಾರತ ಪ್ರವಾಸವನ್ನು ಸ್ಮರಿಸಿಕೊಂಡ ಟ್ರಂಪ್, ‘‘ ಅದೊಂದು ಅಮೋಘವಾದ ಸಮಯವಾಗಿತ್ತು ಹಾಗೂ ಅಲ್ಲಿನ ಜನರಂತೂ ಅಸಾಧಾರಣರು. ಅದೊಂದು ಅಸಾಧಾರಣ ದೇಶ ಹಾಗೂ ಸ್ಥಳವಾಗಿದೆ ’’ ಎಂದು ಅಮೆರಿಕದ ಅಧ್ಯಕ್ಷ ಭಾರತದ ಗುಣಗಾನ ಮಾಡಿದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಈ ವರ್ಷದ ನವೆಂಬರ್ 3ರಂದು ನಡೆಯಲಿದೆ.







