ದಾಖಲೆ ನಿರ್ಮಿಸಿದ ವಿಶ್ರಾಂತ ಪೋಪ್ 16ನೇ ಬೆನೆಡಿಕ್ಟ್

ಫೋಟೊ ಕೃಪೆ :twitter.com
ವ್ಯಾಟಿಕನ್ಸಿಟಿ,ಸೆ.4: 2013ರಲ್ಲಿ ಪೋಪ್ ಸ್ಥಾನವನ್ನು ತ್ಯಜಿಸಿದ್ದ 9ನೇ ಬೆನೆಡಿಕ್ಟ್ ಅವರಿಗೆ ಶುಕ್ರವಾರ 93 ವರ್ಷ ಹಾಗೂ ಐದು ತಿಂಗಳುಗಳು ತುಂಬಿದ್ದು, ಇತಿಹಾಸದಲ್ಲೇ, ಅತ್ಯಂತ ಹಿರಿಯ ವಯಸ್ಸಿನ ‘ಪೋಪ್’ ಎಂಬ ದಾಖಲೆ ನಿರ್ಮಿಸಿದ್ದಾರೆ. ಬೆನೆಡಿಕ್ಟ್ ಅವರು ಪೋಪ್ ಪಟ್ಟದಿಂದ ಇಳಿದಿರುವ ಹೊರತಾಗಿಯೂ ಅವರಿಗೆ ‘ಪೋಪ್ ಎಮೆರಿಟಸ್’(ವಿಶ್ರಾಂತ ಪೋಪ್) ಎಂಬ ಸ್ಥಾನಮಾನ ನೀಡಲಾಗಿದೆ.
ಬೆನೆಡಿಕ್ಟ್ ಅವರು ಕಳೆದ 700 ವರ್ಷಗಳಲ್ಲಿ ನಿವೃತ್ತರಾದ ಮೊದಲ ಪೋಪ್ ಆಗಿದ್ದರು. ಎಂಟು ವರ್ಷಗಳ ಕಾಲ ಪೋಪ್ ಆಗಿ ಸೇವೆ ಸಲ್ಲಿಸಿದ್ದ ಬೆನೆಡಿಕ್ಟ್ ಅವರು ತನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ನಿವೃತ್ತಿಯನ್ನು ಘೋಷಿಸಿದ್ದರು. ಬೆನೆಡಿಕ್ಟ್ ಬಳಿಕ ಅವರಿಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಕಿರಿಯರಾದ ಅರ್ಜೆಂಟೀನಾ ಮೂಲದ ಜಾರ್ಜ್ ಬೆರ್ಗೊಲಿಯೋ ಪೋಪ್ ಆಗಿ ಆಧಿಕಾರ ಸ್ವೀಕರಿಸಿದ್ದರು ಹಾಗೂ ಫ್ರಾನ್ಸಿಸ್ ಎಂದು ಮರುನಾಮಕರಣಗೊಂಡಿದ್ದರು.
1903ರಲ್ಲಿ ನಿಧನರಾದ ಪೋಲ್ 13ನೇ ಲಿಯೋ ಅವರು ಅತ್ಯಂತ ಹಿರಿಯ ವಯಸ್ಸಿನ ಪೋಪ್ ಎಂಬ ದಾಖಲೆಯನ್ನು ಹೊಂದಿದ್ದರು. ಅವರು ಮೃತ ಪಟ್ಟ ಸಂದರ್ಭದಲ್ಲಿ ಅವರಿಗೆ 93 ವರ್ಷ ನಾಲ್ಕು ತಿಂಗಳು ಹಾಗೂ ಮೂರು ದಿನಗಳಾಗಿದ್ದವು. ಆದರೆ ಈಗ ವಿಶ್ರಾಂತ ಪೋಪ್ ಬೆನೆಡಿಕ್ಟ್ ಅವರು ಈ ದಾಖಲೆಯನ್ನು ಮುರಿದಿದ್ದಾರೆ.





