ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪ: ಒಂಭತ್ತು ಮಂದಿಯ ಬಂಧನ

ಮಡಿಕೇರಿ ಸೆ.6: ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಒಂಭತ್ತು ಮಂದಿಯನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ವೃಂದಾವನ ಬಡಾವಣೆ ನಿವಾಸಿ ವಾದಿರಾಜ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ವಿ.ನಾರಾಯಣಸ್ವಾಮಿ, ಬೆಂಗಳೂರಿನ ಹೆಣ್ಣೂರು ರಸ್ತೆ ನಿವಾಸಿ ಜಾನ್ ಪೌಲ್, ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿ ಜ್ಞಾನೇಂದ್ರ ಪ್ರಸಾದ್, ಕೇರಳದ ಚರಕಲ್ ನಿವಾಸಿ ಕೆ.ವಿ.ಅಭಿನವ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಬ್ಬೆಹಳ್ಳಿ ನಿವಾಸಿ ಸತೀಶ್, ತಮಿಳುನಾಡಿನ ಹೊಸೂರು ನಿವಾಸಿ ಸುರೇಶ್, ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಗರ ನಿವಾಸಿ ವೈಷ್ಣವ್ ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಪುರುಷೋತ್ತಮ ಬಂಧಿತ ಆರೋಪಿಗಳಾಗಿದ್ದಾರೆ.
ಮುಂಜಾನೆ ವಿರಾಜಪೇಟೆ ಬಳಿಯ ಪೆರುಂಬಾಡಿ ಎಂಬಲ್ಲಿ ಎರಡು ಕಾರುಗಳಲ್ಲಿ ದರೋಡೆಕೋರರು ನಿಂತಿದ್ದ ಬಗ್ಗೆ ಲಭಿಸಿದ ಮಾಹಿತಿಯಂತೆ ವಿರಾಜಪೇಟೆ ನಗರ ಠಾಣೆಯ ಪಿಎಸ್ಸೈ ಎಚ್.ಎಸ್.ಬೋಜಪ್ಪಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಮೂರು ಕಬ್ಬಿಣದ ಸಲಾಕೆ, ತಲಾ ಒಂದು ಚಾಕು ಮತ್ತು ಲಾಂಗ್ ಮಚ್ಚು, ಎರಡು ತಲ್ವಾರ್, ಖಾರದ ಪುಡಿ, ಸುಮಾರು ಎಂಟು ಕೆ.ಜಿ.ಯಷ್ಟು ಪಾದರಸ ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಠಾಣಾಧಿಕಾರಿ ಬೋಜಪ್ಪ, ಸಿಬ್ಬಂದಿಯಾದ ಎನ್.ಸಿ.ಲೋಕೇಶ್, ಮುಸ್ತಫ, ಸಂತೋಷ್, ಗಿರೀಶ್, ಮಧು, ಮುನೀರ್, ರಜನ್, ಲೋಹಿತ್, ಮಲ್ಲಿಕಾರ್ಜುನ ಹಾಗೂ ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಓರ್ವನಿಗೆ ಕೋವಿಡ್
ಬಂಧಿತ ಆರೋಪಿಗಳ ಪೈಕಿ ಓರ್ವನಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದ್ದು, ಆತನನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







