ಬೆಂಗಳೂರು: ಸೆ.7ರಿಂದ ವಾಯುವಜ್ರ ಬಸ್ ಸೇವೆ ಕಾರ್ಯಾರಂಭ

ಬೆಂಗಳೂರು, ಸೆ.6: ಲಾಕ್‌ಡೌನ್ ತೆರವಾಗಿರುವುದರಿಂದ ನಗರದಲ್ಲಿ ಬಿಎಂಟಿಸಿ ವಜ್ರ ಹಾಗೂ ವಾಯುವಜ್ರ ಹವಾನಿಯಂತ್ರಿತ ಬಸ್‌ಗಳ ಕಾರ್ಯಾಚರಣೆ ನಾಳೆ(ಸೆ.7)ಯಿಂದ ಪುನರಾರಂಭಗೊಳ್ಳಲಿದೆ.
ಕೊರೋನ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಸಂಸ್ಥೆಯು ಹವಾನಿಯಂತ್ರಿತ ಬಸ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರಕಾರ ಸೂಚಿಸಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೋಟೆ, ಅತ್ತಿಬೆಲೆ, ಕಾಡುಗೋಡಿ, ಬನಶಂಕರಿ, ಹೆಬ್ಬಾಳ, ಸಿಲ್ಕ್ ಬೋರ್ಡ್, ಐಟಿಪಿಎಲ್ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಗಳಲ್ಲಿ ಬಸ್ ಸೇವೆ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.
ಗೋವಾಗೆ ಬಸ್ ಸಂಚಾರ: ಲಾಕ್‌ಡೌನ್ ಸಡಿಲಗೊಂಡಿರುವುದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು ನೆರೆಯ ಗೋವಾಕ್ಕೆ ಬಸ್ ಸೇವೆ ಪುನಾರಂಭಿಸಲು ನಿರ್ಧರಿಸಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಗೋವಾಕ್ಕೆ ನಾಳೆ(ಸೆ. 7)ಯಿಂದ ಬಸ್‌ಗಳ ಸೇವೆ ಪ್ರಾರಂಭವಾಗಲಿದೆ.
ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸೇವೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರು ಮುಖಗವಸು ಧರಿಸುವುದು ಕಡ್ಡಾಯವಾಗಿದೆ. ಆಸನಗಳನ್ನು ಕಾಯ್ದಿರಿಸಲು ನಿಗಮದ ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







