ರಾಜ್ಯದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಮುಚ್ಚಲು ನಿರ್ಧಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ. 6: ರಾಜ್ಯದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಎಂದು ಹೆಸರುಗಳಿಸಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿನ(ಬಿಐಇಸಿ) ಕೋವಿಡ್ ಆರೈಕೆ ಕೇಂದ್ರವನ್ನು ಮುಚ್ಚಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿ ಸೋಂಕು ದೃಢಪಟ್ಟು ಲಕ್ಷಣವಿಲ್ಲದವರ ಆರೈಕೆ ಮಾಡುವ ಉದ್ದೇಶದಿಂದ ಪಾಲಿಕೆಯು ಬಿಐಇಸಿಯಲ್ಲಿ 6,500
ಹಾಸಿಗೆಗಳನ್ನು ಅಂದಾಜು 11 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ ಮೂರು ಸಾವಿರ ಹಾಸಿಗೆಗಳನ್ನು ಬಳಕೆ ಮಾಡಲಾಗಿದೆ ಹಾಗೂ 1500 ಸೋಂಕಿತರ ಆರೈಕೆ ಹಾಗೂ 1500 ವೈದ್ಯರು ಹಾಗೂ ವೈದ್ಯಕೀಯ ಸಹಾಯಕಸಿಬ್ಬಂದಿಗೆ ಎಂದು ಮೀಸಲಿಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಸೋಂಕಿನ ಲಕ್ಷಣವಿರುವವರು ಕೋವಿಡ್ ಆರೈಕೆ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಮನೆಯಲ್ಲಿಯೇ ಹೋಂ ಕ್ವಾರಂಟೈನ್ಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರವು ಖಾಲಿಯಾಗುತ್ತಿತ್ತು. ಹೀಗಾಗಿ, ಬಿಐಇಸಿ ಕೋವಿಡ್ ಆರೈಕೆ ಕೇಂದ್ರವನ್ನು ಸೆ.15 ರಿಂದ ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಲಾಗಿದೆ.
ಕೋವಿಡ್ ಆರೈಕೆ ಕೇಂದ್ರದಲ್ಲಿ ಬಿಬಿಎಂಪಿ ವತಿಯಿಂದ ಖರೀದಿಸಲಾಗಿರುವ ಸ್ಟೀಲ್ ಹಾಸಿಗೆಗಳನ್ನು, ಮ್ಯಾಟ್ರಿಸ್ಗಳು, ಫ್ಯಾನ್ಸ್, ಕಸದ ಡಬ್ಬಿ, ಬಕೆಟ್ಸ್, ಮಗ್ಸ್ ಹಾಗೂ ವಾಟರ್ ಡಿಸ್ಪೆನ್ಸರ್ ಪೀಠೋಪಕರಣಗಳನ್ನು ಸರಕಾರಿ ಸ್ವಾಮ್ಯದ ವಸತಿಗೃಹ, ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ಆದೇಶಿಸಲಾಗಿದೆ.
ಪೀಠೋಪಕರಣಗಳ ಹಸ್ತಾಂತರ: ಆರೈಕೆ ಕೇಂದ್ರದಲ್ಲಿರುವ ವಸ್ತುಗಳನ್ನು ತೋಟಗಾರಿಕೆ ವಿವಿ ಬಾಗಲಕೋಟದಲ್ಲಿನ ಹಾಸ್ಟೆಲ್ಗೆ
ಒಂದು ಸಾವಿರ ಪೀಠೋಪಕರಣಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ಬುಡಕಟ್ಟು ಕಲ್ಯಾಣ ಹಾಸ್ಟೆಲ್ಗಳಿಗೆ 2, 500 ಪೀಠೋಪರಕರಣಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ಗೆ ಒಂದು ಸಾವಿರ ಹಾಗೂ ಜಿಕೆವಿಕೆಗೆ ಒಂದು ಸಾವಿರ ಪೀಠೋಪಕರಣಗಳನ್ನು ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ. ಉಳಿದ ಪೀಠೋಪಕರಣಗಳನ್ನು ಸರಕಾರಿ ಆಸ್ಪತ್ರೆ ಹಾಗೂ ಹಾಸ್ಟೆಲ್ಗಳಿಂದ ಬರುವ ಕೋರಿಕೆಯಂತೆ ಹಸ್ತಾಂತರ ಮಾಡಲು ತೀರ್ಮಾನಿಸಲಾಗಿದೆ.







