ರೈತ ವಾಸ್ತವ್ಯಕ್ಕೆ ಮುಂದಾದ ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು, ಸೆ .6: ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ತತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಂಡು ಈ ಬಾರಿ ಬಿತ್ತನೆ ಹೆಚ್ಚಾಗುವಂತೆ ಮಾಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಇದೀಗ ಮತ್ತೊಂದು ಮಹತ್ತರ ಹೆಜ್ಜೆಯಿಟ್ಟಿದ್ದಾರೆ.
ರೈತಾಪಿ ಕುಟುಂಬದಿಂದ ಬಂದಿರುವ ಸ್ವತಃ ಕೃಷಿಕರು ಆಗಿರುವ ಬಿ.ಸಿ.ಪಾಟೀಲರು ಅನ್ನದಾತನ ಕಷ್ಟನಷ್ಟಗಳನ್ನು ಬಹಳ ಹತ್ತಿರದಿಂದ ಬಲ್ಲವರು. ಸದಾ ರೈತರ ಬಗ್ಗೆ ಕಾಳಜಿ ಇತ್ತೀಚೆಗೆ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ನವೀನ ಬದಲಾವಣೆ ಪ್ರಗತಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿರುವ ಕೃಷಿ ಸಚಿವರು ಇದೀಗ ರೈತರೊಂದಿಗೆ ಕಾಲಕಳೆಯಲು ನಿರ್ಧರಿಸಿದ್ದಾರೆ.
ರೈತ ವಾಸ್ತವ್ಯಕ್ಕೆ ಮುಂದಾಗಿದ್ದಾರೆ: ಕೋವಿಡ್-19 ಮುಗಿದ ಬಳಿಕ ರೈತ ವಾಸ್ತವ್ಯಕ್ಕೆ ಹೆಜ್ಜೆಯಿಟ್ಟಿರುವ ಸಚಿವ ಬಿ.ಸಿ.ಪಾಟೀಲರು ಕೃಷಿ ಅಧಿಕಾರಿಗಳ ಜೊತೆ ಪ್ರಗತಿಪರ ರೈತರನ್ನು ಭೇಟಿಮಾಡಿ ರೈತರ ನಿವಾಸದಲ್ಲಿ ವಾಸ್ತವ್ಯ ಹೂಡುವುದು, ರೈತರ ಜೊತೆಗೆ ಚರ್ಚೆ, ಪ್ರಗತಿಪರ ರೈತರ ಸಾಧನೆಗಳನ್ನು ಇತರ ರೈತರಿಗೂ ಪ್ರೇರಣೆಯಾಗಿಸುವುದು ಸೇರಿದಂತೆ ರೈತರ ಸಮಸ್ಯೆಗಳನ್ನು ಆಲಿಸಲು ಮುಂದಾಗಲಿದ್ದಾರೆ.
ಕೊರೋನ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ರೈತ ವಾಸ್ತವ್ಯಕ್ಕೆ ರೂಪುರೇಷೆ ಸ್ಥಳ ಮತ್ತು ದಿನಾಂಕದ ಆಯ್ಕೆ ನಿಗದಿಪಡಿಸಲಿದ್ದು, ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಇದರಿಂದ ಕೃಷಿಕರ ಪರಿಸ್ಥಿತಿ ಮತ್ತು ಕೃಷಿ ಸಮಸ್ಯೆಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.







