ಕೋವಿಡ್-19 ಅಪಪ್ರಚಾರದಿಂದ ಹಲವು ಜೀವಹಾನಿ: ರಘುಪತಿ ಭಟ್

ಉಡುಪಿ, ಸೆ.6: ಕೊರೋನಾವನ್ನು ಆಡಳಿತಾತ್ಮಕವಾಗಿ ನಿಯಂತ್ರಣಕ್ಕೆ ತರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲದ ರಾಜಕೀಯ ಸ್ವಹಿತಾಸಕ್ತಿ ಗುಂಪು ಗಳು ಈ ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ಮಾಡಿ ಕರೋನಾ ಯೋಧರ ಆತ್ಮವಿಸ್ವಾಸಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಪುರಭವನ ದಲ್ಲಿ ರವಿವಾರ ನಡೆದ ಕೋವಿಡ್-19 ಜನ ಸೇವಾ ಅಭಿಯಾನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ಹರಿದಾಡುವ ಈ ಸಂದೇಶಗಳಿಂದ ಮುಗ್ದ ಜನರು ಸಾಮಾನ್ಯ ರೋಗ ಲಕ್ಷಣಗಳು ಗೋಚರಿಸಿದಾಗ ಆಸ್ಪತ್ರೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸಂದೇಶಗಳ ಪರಿಣಾಮ ದಿಂದ ಉಡುಪಿ ಯಲ್ಲಿ ಅನೇಕ ಜೀವಹಾನಿಯಾಗಿವೆ. ಆದುದರಿಂದ ಕೋವಿಡ್ ಪರೀಕ್ಷೆಗಳ ಬಗ್ಗೆ ಅಪನಂಬಿಕೆಗಳನ್ನು ಬಿಟ್ಟು ಜಿಲ್ಲಾಡಳಿತದೊಂದಿಗೆ ಕೈಜೋಡಿ ಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕುಯಿಲಾಡಿ ಉದ್ಘಾಟಿಸಿದರು. ಉಡುಪಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ.ಶಶಿಕಿರಣ್ ಉಮಕಾಂತ್, ಮಣಿಪಾಲ ಕೆಎಂಸಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಡಾ.ವಂದನಾ ಕೆ.ಇ. ಕೊರೋನಾ ವೈರಸ್ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ್ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಅಲ್ಪಸಂಖ್ಯಾತ ಮೋರ್ಚಾ ಪ್ರದಾನ ಕಾರ್ಯದರ್ಶಿ ಅಲ್ವಿನ್ ಡಿಸೋಜ, ವಕ್ತಾರ ಶಿವಕುಮಾರ್, ಕಾರ್ಯಕಾರಿಣಿ ಸದಸ್ಯೆ ಭಾರತಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ವಂದಿಸಿದರು.







