ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ಮತ್ತೋರ್ವ ಪ್ರಮುಖ ಆರೋಪಿಯ ಬಂಧನ

ಬೆಂಗಳೂರು, ಸೆ. 6: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಆರೋಪ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಶಾಂತ್ ರಂಕಾ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ರಾಜಸ್ತಾನ ಮೂಲದ ವ್ಯಕ್ತಿ, ಹಲವು ದಿನಗಳಿಂದ ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‍ಐಆರ್‍ನಲ್ಲಿ ಪ್ರಶಾಂತ್ ರಂಕಾ, ನಾಲ್ಕನೇ ಆರೋಪಿಯಾಗಿದ್ದು, ಈತನೂ ಬಂಧಿತ ರವಿಶಂಕರ್‍ಗೆ ಆಪ್ತನಾಗಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಬಂಧಿತ ಪ್ರಶಾಂತ್ ರಂಕಾ ಡ್ರಗ್ಸ್ ಪೂರೈಕೆ ಮತ್ತು ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತಿದ್ದು, ಈತ ನಟಿ ರಾಗಿಣಿ ಹಾಗೂ ರವಿಶಂಕರ್ ನೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈತನ ಬಳಿಯಿದ್ದ 3 ಮೊಬೈಲ್‍ಗಳನ್ನು ಸಹ ಪೊಲೀಸರು ಜಪ್ತಿ ಮಾಡಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಪೆಡ್ಲರ್ ವಿಚಾರಣೆ: ಪೆಡ್ಲರ್ ಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಹೊಸದಿಲ್ಲಿ ಮೂಲದ ವಿರೇನ್ ಖನ್ನಾ ವಿಚಾರಣೆ ಮುಂದುವರೆದಿದ್ದು, ಈತ ನಟಿ ರಾಗಿಣಿ ದ್ವಿವೇದಿಯೊಂದಿಗೆ ನಂಟು ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.







