ಬೆಂಗಳೂರಿನಲ್ಲಿ ಕೊರೋನ ಮರುಸೋಂಕಿನ ಪ್ರಪ್ರಥಮ ಪ್ರಕರಣ ವರದಿ
![ಬೆಂಗಳೂರಿನಲ್ಲಿ ಕೊರೋನ ಮರುಸೋಂಕಿನ ಪ್ರಪ್ರಥಮ ಪ್ರಕರಣ ವರದಿ ಬೆಂಗಳೂರಿನಲ್ಲಿ ಕೊರೋನ ಮರುಸೋಂಕಿನ ಪ್ರಪ್ರಥಮ ಪ್ರಕರಣ ವರದಿ](https://www.varthabharati.in/sites/default/files/images/articles/2020/09/6/258027-1599401988.jpeg)
ಬೆಂಗಳೂರು, ಸೆ.6: ಜುಲೈಯಲ್ಲಿ ಕೊರೋನ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೂರ್ಣ ಚೇತರಿಸಿಕೊಂಡು ಬಿಡುಗಡೆಯಾಗಿದ್ದ 27 ವರ್ಷದ ಮಹಿಳೆಯಲ್ಲಿ ಎರಡನೇ ಬಾರಿ ಕೊರೋನ ಸೋಂಕು ಕಾಣಿಸಿಕೊಂಡಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಮಹಿಳೆಯ ದೇಹದಲ್ಲಿ ಕೊರೋನ ಪ್ರತಿರೋಧಕ ಶಕ್ತಿ ಅಭಿವೃದ್ಧಿಯಾಗದಿರುವುದು ತಿಳಿದು ಬಂದಿದೆ. ಬಹುಷಃ ನಗರದಲ್ಲಿ ದಾಖಲಾಗಿರುವ ಪ್ರಪ್ರಥಮ ಕೊರೋನ ಮರುಸೋಂಕಿನ ಪ್ರಕರಣ ಇದಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ ಪ್ರತೀಕ್ ಪಾಟೀಲ್ ಹೇಳಿದ್ದಾರೆ.
ಸಾಮಾನ್ಯವಾಗಿ, ಸೋಂಕಿನ ಸಂದರ್ಭ ರೋಗಿಗಳ ದೇಹದಲ್ಲಿ 2ರಿಂದ 3 ವಾರಗಳ ಬಳಿಕ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. ಆದರೆ ಈ ಪ್ರಕರಣದಲ್ಲಿ ಪ್ರತಿರೋಧಕ ಶಕ್ತಿಯಲ್ಲಿ ನೆಗೆಟಿವ್ ವರದಿ ಬಂದಿದೆ. ಅಂದರೆ ಪ್ರಥಮ ಸೋಂಕಿನ ಬಳಿಕ ಈ ಮಹಿಳೆಯಲ್ಲಿ ಪ್ರತಿರೋಧಕ ಶಕ್ತಿ ಬೆಳವಣಿಗೆಯಾಗಿಲ್ಲ. ಅಥವಾ, ಒಂದು ತಿಂಗಳೊಳಗೆ ಪ್ರತಿರೋಧಕ ಶಕ್ತಿ ನಾಶವಾಗಿರುವ ಸಾಧ್ಯತೆಯೂ ಇದೆ. ಎಲ್ಲಾ ವ್ಯಕ್ತಿಗಳ ದೇಹದಲ್ಲೂ ಪ್ರತಿರೋಧಕ ಶಕ್ತಿ ಬೆಳೆಯುವುದಿಲ್ಲ ಅಥವಾ ಬೆಳೆದರೂ, ದೀರ್ಘ ಅವಧಿಯವರೆಗೆ ಉಳಿಯುವುದಿಲ್ಲ ಎಂಬುದನ್ನು ಮರುಸೋಂಕು ಪ್ರಕರಣ ತಿಳಿಸುತ್ತದೆ ಎಂದವರು ವಿವರಿಸಿದ್ದಾರೆ.
ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣ ನಿರಂತರ ಏರಿಕೆಯಾಗುತ್ತಿರುವ ಮಧ್ಯೆಯೇ, ಮರು ಸೋಂಕಿನ ಪ್ರಕರಣ ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಸೋಂಕಿನ ವಿರುದ್ಧದ ಲಸಿಕೆ ಎಷ್ಟು ಸಮಯದವರೆಗೆ ಪರಿಣಾಮ ಬೀರಬಹುದು ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಆದರೆ ಮರು ಸೋಂಕಿನ ಪ್ರಕರಣ ಅಪರೂಪದ ವಿದ್ಯಮಾನವಾಗಿದ್ದು ಆತಂಕಕ್ಕೆ ಕಾರಣವಿಲ್ಲ. ಆದರೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯದಲ್ಲೂ ಮರುಸೋಂಕಿನ ಪ್ರಕರಣ ವರದಿಯಾಗಿದೆ. ಹಾಂಕಾಂಗ್, ಅಮೆರಿಕ, ನೆದರ್ ಲ್ಯಾಂಡ್ ಮತ್ತು ಬೆಲ್ಜಿಯಂ ದೇಶದಲ್ಲೂ ಈ ಬಗ್ಗೆ ವರದಿಯಾಗಿದೆ ಎಂದು ಮೂಲಗಳು ಹೇಳಿವೆ.