ಸೆ.7: ಡ್ರಗ್ಸ್ ಪ್ರಕರಣದ ಆರೋಪಿಗಳ ಪರೇಡ್
ಮಂಗಳೂರು, ಸೆ.6: ನಗರದ ಪೊಲೀಸ್ ಕಮಿಷನೇಟ್ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಮಾದಕ ಸಾಗಾಟ ಮತ್ತು ವ್ಯಸನ ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳ ಪರೇಡ್‌ನ್ನು ಸೆ.7ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಮಾದಕ ಪ್ರಕರಣಗಳ ಕೇಸು ದಿನೇದಿನೇ ಹೆಚ್ಚಳವಾಗುತ್ತಿದ್ದು, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್‌ಕುಮಾರ್ ಅವರ ನಿರ್ದೇಶನದ ಮೇರೆಗೆ ಆರೋಪಿಗಳ ಪರೇಡ್ ಮಾಡಲು ನಿರ್ಧರಿಸಲಾಗಿದೆ.
ಬೆಳಗ್ಗೆ 10ಗಂಟೆಗೆ ಗಾಂಜಾ ಸಾಗಾಟ ಪ್ರಕರಣದ ಆರೋಪಿಗಳ ಪರೇಡ್ ನಡೆದರೆ, ಸಂಜೆ 4 ಗಂಟೆಗೆ ಗಾಂಜಾ ವ್ಯಸನಿಗಳ ಪರೇಡ್ ನಡೆಯಲಿದೆ. ಇದರಲ್ಲಿ ನಾರ್ಕೊಟಿಕ್ ಪೊಲೀಸ್ ಠಾಣೆಯ 60 ಆರೋಪಿಗಳು ಸೇರಿದಂತೆ ಸುಮಾರು 250ಕ್ಕೂ ಅಧಿಕ ಆರೋಪಿಗಳು ಭಾಗವಹಿಸುವ ಸಾಧ್ಯತೆಯಿದೆ. ಸದ್ಯ ಮಂಗಳೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಆರೋಪಿಗಳನ್ನು ಪರೇಡ್‌ಗೆ ಬರಹೇಳಿದ್ದು, ಅನಿವಾರ್ಯವಾದರೆ ಹೊರಜಿಲ್ಲೆಯ ಆರೋಪಿಗಳನ್ನು ಪರೇಡ್ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಮಾಂತರದಲ್ಲೂ ಪರೇಡ್: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನಿರ್ದೇಶನದಲ್ಲಿ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಯನ್ನು ಬಿಡುಗಡೆಗೊಳಿಸಲಾಗಿದೆ.
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಪೊಲೀಸ್ ವರಿಷ್ಠಾಧಿಕಾರಿಗಳ ಪರೇಡ್ ನಡೆಸಲಾಗುತ್ತಿದೆ. ನಿರಂತರ ಗಾಂಜಾ ಸಾಗಾಟದಲ್ಲಿ ತೊಡಗಿಸಿಕೊಂಡ ಆರೋಪಿಗಳ ಮೇಲೆ ವಿಶೇಷ ನಿಗಾಯಿರಿಸಲಾಗಿದೆ ಎಂದು ತಿಳಿದುಬಂದಿದೆ.







