ಮಂಗಳೂರು ವಿವಿಯ ಸಂಸ್ಕೃತ ಪಠ್ಯಪುಸ್ತಕಗಳ ಬಿಡುಗಡೆ
ಉಡುಪಿ, ಸೆ.6: ಮಂಗಳೂರು ವಿಶ್ವವಿದ್ಯಾನಿಲಯ ಸಂಸ್ಕೃತ ಶಿಕ್ಷಕರ ಸಂಘ ಹಾಗೂ ಪೂರ್ಣ ಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗಗಳ ಜಂಟಿ ಆಶ್ರಯದಲ್ಲಿ ಮಂಗಳೂರು ವಿವಿಯ ತೃತೀಯ ಸೆಮಿಸ್ಟರ್‌ನ ಸಂಸ್ಕೃತ ಪಠ್ಯ ಪುಸ್ತಕಗಳನ್ನು ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ರವಿವಾರ ಉಡುಪಿಯ ಅದಮಾರು ಮಠದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಕೊರೊನಾದಿಂದ ಶೈಕ್ಷಣಿಕ ಚಟುವಟಿಕೆ ಗಳಿಗೆ ಹಿನ್ನಡೆ ಉಂಟಾಗಿದೆ. ಈ ಸಂದರ್ಭದಲ್ಲಿ ಪಠ್ಯವನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು. ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಸುಲಭ ವಾಗುವಂತೆ ಪಠ್ಯ ಪುಸ್ತಕಗಳನ್ನು ಈ ಬಾರಿ ಸಿದ್ಧಗೊಳಿಸಬೇಕಾಗಿದೆ ಎಂದರು.
ಪೂರ್ಣಪ್ರಜ್ಞ ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಮಂಗಳೂರು ವಿವಿ ಸಂಸ್ಕೃತ ಶಿಕ್ಷಕ ಸಂಘದ ಕಾರ್ಯದರ್ಶಿ ಡಾ.ಮಂಜುನಾಥ ಭಟ್, ಸಮರ್ಪಣಾ ಪ್ರತಿಷ್ಠಾನದ ರವಿರಾಜ ಭಟ್, ಸಂಧ್ಯಾ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ರಾುಕೃಷ್ಣ ಉಡುಪ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.





