ರದ್ದಾದ ವಿಮಾನಗಳ ಟಿಕೆಟ್ ಶುಲ್ಕ ಮರು ಪಾವತಿಗೆ 31ರ ವರೆಗೆ ಸಮಯ ನೀಡಿ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ

ಹೊಸದಿಲ್ಲಿ, ಸೆ. 6: ಲಾಕ್‌ಡೌನ್ ಸಂದರ್ಭ ರದ್ದುಗೊಳಿಸಲಾದ ವಿಮಾನಗಳ ಟಿಕೆಟು ಶುಲ್ಕವನ್ನು ಪ್ರಯಾಣಿಕರಿಗೆ ಮರು ಪಾವತಿಸಲು ವಿಮಾನ ಯಾನ ಸಂಸ್ಥೆಗಳಿಗೆ 2021 ಮಾರ್ಚ್ 31ರ ವರೆಗೆ ಕಾಲಾವಕಾಶ ನೀಡುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತನ್ನ ಅಫಿಡವಿಟ್‌ನಲ್ಲಿ ಕೇಂದ್ರ ಸರಕಾರ, ಟಿಕೆಟಿನ ಈ ಶುಲ್ಕವನ್ನು ಮುಂದಿನ ಮುಂಗಡ ಟಿಕೆಟ್ ಕಾಯ್ದಿರಿಸಲು ಮಾರ್ಚ್ 31ರ ವರೆಗೆ ಪ್ರಯಾಣಿಕರು ಬಳಸಲು ಸಾಧ್ಯವಾಗುವ, ಒಂದು ವೇಳೆ ಅವರಿಗೆ ಈ ಶುಲ್ಕ ಬಳಸಲು ಸಾಧ್ಯವಾಗದೇ ಇದ್ದರೆ ಹಿಂದಿರುಗಿಸುವ ವಿಮಾನ ಯಾನ ಸಂಸ್ಥೆಗಳ ಚಿಂತನೆಗೆ ಒಲವು ವ್ಯಕ್ತಪಡಿಸಿದೆ. ಈ ಮೊತ್ತವನ್ನು ವರ್ಗಾವಣೆ ಮಾಡಬಹುದಾಗಿದೆ ಹಾಗೂ ಅತ್ಯುನ್ನತ ಸೌಲಭ್ಯಗಳೊಂದಿಗೆ ಯಾವುದೇ ಮಾರ್ಗದಲ್ಲಿ ಪ್ರಯಾಣಿಸಲು ಬಳಸಬಹುದಾಗಿದೆ. ಬಳಸದೇ ಇದ್ದರೆ, 2021 ಮಾರ್ಚ್ ಅಂತ್ಯದ ಒಳಗೆ ಈ ಮೊತ್ತವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದು ಎಂದು ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶಕರು ಅಪಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಮಾರ್ಚ್ 25ರಿಂದ ಎಪ್ರಿಲ್ 14ರ ವರೆಗಿನ ಮೊದಲ ಲಾಕ್‌ಡೌನ್ ಅವಧಿಯ ಸಂದರ್ಭ ಟಿಕೆಟ್ ಮಂಗಡ ಕಾಯ್ದಿರಿಸಿರುವುದಕ್ಕೆ ಸಂಬಂಧಿಸಿ ಎಪ್ರಿಲ್ 16ರಂದೇ ಸುತ್ತೋಲೆ ಹೊರಡಿಸಲಾಗಿತ್ತು. ಟಿಕೇಟು ಮುಂಗಡ ಕಾಯ್ದಿರಿಸಲು ನೀಡಿದ ಶುಲ್ಕವನ್ನು ಪ್ರಯಾಣಿಕರಿಗೆ ಮರು ಪಾವತಿಸದೇ ಇರುವುದು ಡಿಜಿಸಿಎಯ ನಿರ್ದೇಶನಕ್ಕೆ ವಿರುದ್ಧವಾದುದು. ಆದುದರಿಂದ ಕೂಡಲೇ ಮರು ಪಾವತಿಸುವಂತೆ ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿತ್ತು. ವಿಮಾನ ಯಾನ ಸಂಸ್ಥೆಗಳು ಶುಲ್ಕ ಮರುಪಾವತಿಸದೇ ಇರುವುದು ಹಾಗೂ ಈ ಶುಲ್ಕವನ್ನು ಟಿಕೆಟು ಮುಂಗಡ ಕಾಯ್ದಿರಿಸಲು ಉಳಿಸಿಕೊಳ್ಳುವುದು ನಾಗರಿಕ ವಿಮಾನ ಯಾನದ ಅಗತ್ಯತೆಗಳು ಹಾಗೂ ವೈಮಾನಿಕ ನಿಯಮಗಳ ಅಡಿಯಲ್ಲಿ ರೂಪಿಸಲಾದ ನಿಯಂತ್ರಣ ಚೌಕಟ್ಟಿನ ಉಲ್ಲಂಘನೆ ಎಂಬುದನ್ನು ಕೇಂದ್ರ ಸರಕಾರ ಅಫಿಡವಿಟ್‌ನಲ್ಲಿ ಒಪ್ಪಿಕೊಂಡಿತ್ತು.
ಈ ಉಲ್ಲಂಘನೆಗಳು ವಿಮಾನ ಯಾನ ಸಂಸ್ಥೆಗಳ ವಿರುದ್ಧ ಕ್ರಮ ಜಾರಿಗೆ ಕಾರಣವಾಗಬಹುದು ಎಂಬುದನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳುವುದರೊಂದಿಗೆ, ಇಂತಹ ಕ್ರಮಗಳು ವಿಮಾನ ಯಾನ ಕ್ಷೇತ್ರದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು ಎಂದು ಅಫಿಡವಿಟ್‌ನಲ್ಲಿ ಒತ್ತಿ ಹೇಳಿದೆ.







