ಭಾರತದ ಅಭಿವೃದ್ಧಿ ಪ್ರಮಾಣ ಅಂಕಿಅಂಶಗಳು ಆತಂಕ ಹುಟ್ಟಿಸುತ್ತಿವೆ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

ಹೊಸದಿಲ್ಲಿ: ಭಾರತದ ಅಭಿವೃದ್ಧಿ ಪ್ರಮಾಣದ ಅಂಕಿಅಂಶಗಳು ಎಲ್ಲರನ್ನೂ ದಿಗಿಲುಗೊಳಿಸುವಂತಹದ್ದು ಎಂದಿರುವ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್, ಕೊರೋನದಿಂದ ತೀವ್ರ ಬಾಧಿತವಾಗಿರುವ ಅಮೆರಿಕಾ ಮತ್ತು ಇಟಲಿಯ ಆರ್ಥಿಕತೆಗಿಂತಲೂ ಭಾರತದ ಆರ್ಥಿಕತೆ ತೀರಾ ದುಸ್ಥಿತಿಯಲ್ಲಿದೆ ಎಂದಿದ್ದಾರೆ.
“ನಿಸ್ಸಂಶಯವಾಗಿ ಸರಕಾರ ಮತ್ತದರ ಅಧಿಕಾರಿಗಳು ಎಂದಿನಂತೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರನ್ನು ಇನ್ನಷ್ಟು ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು. ತನ್ನ ಯುವಜನತೆಯ ಆಶೋತ್ತರಗಳನ್ನು ಈಡೇರಿಸಲು ಹಾಗೂ ಸ್ನೇಹದಿಂದಿಲ್ಲದ ನೆರೆಯ ರಾಷ್ಟ್ರಗಳನ್ನು ದೂರವಿಡಲು ಭಾರತ ಸುದೃಢ ಆರ್ಥಿಕತೆ ಹೊಂದಬೇಕಿದೆ'' ಎಂದು ಚಿಕಾಗೋ ವಿವಿಯಲ್ಲಿ ಪ್ರೊಫೆಸರ್ ಆಗಿರುವ ರಾಜನ್ ಹೇಳಿದರು.
ಆರ್ಥಿಕತೆಗೆ ಚೈತನ್ಯವೊದಗಿಸುವುದು ಒಂದು ಟಾನಿಕ್ ನಂತೆ. ಆದರೆ ರೋಗಿಯ ಸ್ಥಿತಿ ಕ್ಷೀಣವಾಗಿದ್ದರೆ, ಆ ಚೈತನ್ಯದ ಕ್ರಮ ಅಷ್ಟೊಂದು ಪರಿಣಾಮಕಾರಿಯಾಗದು ಎಂದು ರಾಜನ್ ಹೇಳಿದರು.
ಸಂಪನ್ಮೂಲಗಳನ್ನು ಭವಿಷ್ಯದ ಸಂಭಾವ್ಯ ಉತ್ತೇಜಕ ಕ್ರಮಗಳಿಗೆ ಸಂರಕ್ಷಿಸಿಡುವ ಕಾರ್ಯತಂತ್ರ ನಿಷ್ಪ್ರಯೋಜಕ. ಆರ್ಥಿಕತೆಯನ್ನು ಉತ್ತೇಜಿಸುವ ಕ್ರಮವನ್ನು ಜಾರಿಗೊಳಿಸಲು ವಿಳಂಬಿಸುವುದರಿಂದ ದೇಶಕ್ಕೇನೂ ಲಾಭವಿಲ್ಲ. ಬಡ ಕುಟುಂಬಗಳಿಗೆ ಆಹಾರ , ಎಂಎಸ್‌ಎಂಇ(ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆ) ಕ್ಷೇತ್ರಕ್ಕೆ ನೀಡುವ ಬ್ಯಾಂಕ್ ಸಾಲಗಳಿಗೆ ಗ್ಯಾರಂಟಿ ನೀಡುವುದು ಸೇರಿದಂತೆ ಸರಕಾರ ಘೋಷಿಸಿರುವ ಕ್ರಮಗಳು ಅತ್ಯಲ್ಪವಾಗಿದೆ. ಇನ್ನಷ್ಟು ನೆರವಿನ ಕ್ರಮ ಜಾರಿಗೊಳಿಸಿದರೆ ಮಾತ್ರ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ದೊರಕುತ್ತದೆ ಎಂದು ರಾಜನ್ ಹೇಳಿದ್ದಾರೆ.
2020-21ರ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯ ಐತಿಹಾಸಿಕ ಪತನದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಇದು ಎಚ್ಚರಿಕೆಯ ಕರೆಗಂಟೆಯಾಗಿದೆ ಮತ್ತು ಅಸಂಘಟಿತ ವಲಯದ ನಷ್ಟಗಳನ್ನೂ ಲೆಕ್ಕಹಾಕಿದ ಪರಿಷ್ಕೃತ ಜಿಡಿಪಿ ಅಂಕಿಅಂಶದಲ್ಲಿ ಮತ್ತಷ್ಟು ಕುಸಿತ ದಾಖಲಾಗಬಹುದು ಎಂದಿದ್ದಾರೆ.
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸಾಧನೆ ಅತ್ಯಂತ ಕಳಪೆಯಾಗಿದೆ. ಸರಕಾರ ಕೂಡಲೇ ಇನ್ನಷ್ಟು ಆರ್ಥಿಕ ನೆರವಿನ ಉಪಕ್ರಮ ಜಾರಿಗೊಳಿಸದಿದ್ದರೆ, ಮಧ್ಯಮ ವರ್ಗದ ಜನತೆ ತಮ್ಮ ಖರೀದಿ ವೆಚ್ಚವನ್ನು ಇನ್ನೂ ಕಡಿಮೆಗೊಳಿಸಬಹುದು. ಸರಕಾರದ ನೆರವಿನ ಹಸ್ತ ದೊರಕದಿದ್ದರೆ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಹೋಟೆಲ್‌ಗಳು ಬಾಗಿಲು ಮುಚ್ಚುತ್ತವೆ ಮತ್ತು ಹಲವು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ. ಸರಕಾರದ ಪರಿಹಾರ ಕ್ರಮಗಳಿಲ್ಲದಿದ್ದರೆ ಆರ್ಥಿಕತೆಯ ಅಭಿವೃದ್ಧಿಯ ಸಾಮರ್ಥ್ಯ ಕುಸಿಯುತ್ತದೆ. ಸರಕಾರಿ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು ಎಂದು ರಾಜನ್ ಹೇಳಿದ್ದಾರೆ.







