ಮಲ್ಪೆ: ಫ್ಲವರ್ಸ್ ಆಫ್ ಪ್ಯಾರಡೈಸ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ
ಆದರ್ಶ ಶಿಕ್ಷಕ ದಿ. ಮಲ್ಪೆ ಮಾಧವ ಜತ್ತನ್ನಗೆ ನುಡಿ ನಮನ

ಮಲ್ಪೆ : ಇಲ್ಲಿನ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರಿಗೆ ಅಭಿನಂದನೆ ಮತ್ತು ಇತ್ತೀಚೆಗೆ ನಿಧನರಾದ ಆದರ್ಶ ಶಿಕ್ಷಕ ಮಾಧವ ಮಾಸ್ಟರ್ ಎಂದೇ ಜನಪ್ರಿಯರಾದ ದಿ. ಮಲ್ಪೆ ಮಾಧವ ಜತ್ತನ್ನ ಅವರಿಗೆ ನುಡಿ ನಮನ ಮಾಡುವ ಮೂಲಕ ಆಚರಿಸಲಾಯಿತು.
ಶಾಲೆಯ ಶೈಕ್ಷಣಿಕ ನಿರ್ದೇಶಕ ಯಾಸೀನ್ ಮಲ್ಪೆ ಈ ಸಂದರ್ಭ ಮಾತನಾಡಿದ, ಯಾವುದೇ ಸೇವೆಗೆ ನಾವು ಸಲ್ಲಿಸುವ ಕೃತಜ್ಞತೆ ಮತ್ತು ಗೌರವ ಆ ಸೇವೆಯ ಘನತೆಗೆ ಒಪ್ಪುವಂತಿರಬೇಕು. ಆದರೆ ಶಿಕ್ಷಕರ ವಿಷಯದಲ್ಲಿ, ಅವರಿಗೆ ಸಮಾಜದಲ್ಲಿ ಸಿಗುತ್ತಿರುವ ಗೌರವ, ಅವರು ಸಮಾಜಕ್ಕೆ ಕೊಡುತ್ತಿರುವ ಸೇವೆ ಮತ್ತು ಕೊಡುಗೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದ್ದು ಎಂದರು. ಸಮಾಜವನ್ನು ಕಟ್ಟುವ, ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಮುಂದಿನ ಪೀಳಿಗೆಗೆ ರಚನಾತ್ಮಕ ದಿಕ್ಕು ತೋರಿಸುವ ಸರ್ವಶ್ರೇಷ್ಠ ಕಾರ್ಯದಲ್ಲಿ ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಅಷ್ಟೇ ಶ್ರೇಷ್ಠ ಮಟ್ಟದ ಗೌರವ ಸಲ್ಲಿಸಬೇಕಾಗಿದೆ ಎಂದರು.
ದಿ. ಮಾಧವ ಮಾಸ್ಟರ್ ತಮ್ಮ ಶಿಕ್ಷಕ ಹುದ್ದೆಯ ಋಣ ತೀರಿಸಿದ ಆದರ್ಶ ಶಿಕ್ಷಕ. ಓರ್ವ ಶಿಕ್ಷಕನಾಗಿ ಸಮಾಜಕ್ಕೆ ಏನೆಲ್ಲಾ ಕೊಡಲು ಸಾಧ್ಯವೋ ಅದೆಲ್ಲವನ್ನೂ ಅವರು ಕೊಟ್ಟು ಹೋದರು. ಮಲ್ಪೆಯ ಒಂದು ಪ್ರೌಢಶಾಲೆ, ಮತ್ತೊಂದು ಆಂಗ್ಲ ಮಾಧ್ಯಮ ಶಾಲೆ ಈ ಊರಿಗೆ ಮಾಧವ ಮಾಸ್ಟರ್ ರ ಅತಿದೊಡ್ಡ ಕೊಡುಗೆಗಳು, ಈ ಶಾಲೆಗಳ ಪ್ರತಿಯೊಂದು ಗೋಡೆಯ ಹಿಂದೆಯೂ ಅವರ ಬೆವರ ಹನಿಗಳಿವೆ ಎಂದರು. ನಮ್ಮೆಲ್ಲಾ ಶಿಕ್ಷಕರಿಗೆ ಮಾಧವ ಮಾಸ್ಟರ್ ಒಂದು ಅನುಕರಣಾರ್ಹ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಾವರದ ಯಶಸ್ವಿ ಫಿಶ್ ಮೀಲ್ ನ ಉದಯ ಕುಮಾರ್ ಸಾಲ್ಯಾನ್, ಮಾಧವ ಮಾಸ್ಟರ್ ರ ಪುತ್ರಿ ಅಂಜನಾ ದೇವಿ ಹಾಗೂ ಅವರ ಸಹೋದರ ನವೀನ್ ಚಂದ್ರ ಜತ್ತನ್ನ ಅವರಿಗೆ ಮಾಧವ ಮಾಸ್ಟರ್ ರ ಹೆಸರಿನ ಗೌರವ ಫಲಕವನ್ನು ನೀಡಿ ಸನ್ಮಾನಿಸಿದರು.
ಸನ್ಮಾನಕ್ಕೆ ಸ್ಪಂದಿಸಿ ಮಾತನಾಡಿದ ಮಾಸ್ಟರ್ ರ ಸಹೋದರ ಮತ್ತು ಪುತ್ರಿ, ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ತಮ್ಮ ಸಹೋದರ ಮತ್ತು ತಂದೆಗೆ ಕೊಟ್ಟ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಮಲ್ಪೆ ಎಜುಕೇಷನ್ ಟ್ರಸ್ಟ್ ನ ಸದಸ್ಯ ಉಸ್ತಾದ್ ಉಸ್ಮಾನ್ ಕೊಡವೂರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಪ್ರಾರಂಭದಲ್ಲಿ ಮಾಧವ ಮಾಸ್ಟರ್ ಕುರಿತು ವ್ಯಕ್ತಿಚಿತ್ರ ವೊಂದನ್ನು ಪ್ರದರ್ಶಿಸಲಾಯಿತು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಹನಾ ಅನಿಲ್ ವ್ಯಕ್ತಿ ಚಿತ್ರ ಪರಿಚಯ ನೀಡಿದರು. ಅರೇಬಿಕ್ ಶಿಕ್ಷಣ ಮುಖ್ಯಸ್ಥ ಮೌಲಾನಾ ಇಮ್ರಾನುಲ್ಲಾ ಖಾನ್ ಸಮಾರೋಪ ಭಾಷಣ ಮಾಡಿದರು.
ಈ ವರ್ಷ ಎಸೆಸೆಲ್ಸಿ ಪರೀಕ್ಷೆಯಲ್ಲಿ, ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಕಾರಣಕರ್ತರಾದ ಶಿಕ್ಷಕ ಜಾಫರ್ ಅಲಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಕಳೆದ ಲಾಕ್ ಡೌನ್ ಅವಧಿಯಲ್ಲಿ ಶಿಕ್ಷಕರಿಗಾಗಿ ನಡೆದಿದ್ದ ಆನ್ ಲೈನ್ ಕ್ವಿಝ್ ಸ್ಪರ್ಧೆಯ ವಿಜೇತರಾದ ಸಾಮ್ಯಾ ಸಲೀಮ್ ಮತ್ತು ಮುನವ್ವರ ಅವರಿಗೆ ಇದೇ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಸೇವೆಯನ್ನು ಪ್ರಶಂಸಿಸಿ ಗೀತೆ ಹಾಡಿದರು. ಟ್ರಸ್ಟ್ ನ ಅಧ್ಯಕ್ಷರಾದ ಎಫ್. ಎಂ. ಅಬ್ದುರ್ರಝಾಕ್ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಟ್ರಸ್ಟ್ ನ ಸದಸ್ಯರಾದ ಖತೀಬ್ ಅಲ್ತಾಫ್, ಟಿ. ಖುರೈಷ್ ಮತ್ತು ಫಿರೋಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ನೌಶೀನ್ ಸ್ವಾಗತಿಸಿ, ಜ್ಯೋತಿ ವಂದಿಸಿದರು. ಮಾರ್ಟೀನಾ ಕಾರ್ಯಕ್ರಮ ನಿರೂಪಿಸಿದರು.








