ಸಬ್ಸಿಡಿ ಇಲ್ಲ, ಜಿಎಸ್ಟಿ ಪರಿಹಾರ ಕೊಡುವುದಿಲ್ಲ ಎಂದು ಹೇಳಲು ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಿದ್ದಾರೆಯೇ ?
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಸೆ.7: ಡ್ರಗ್ ಮಾಫಿಯಾ ಎಲ್ಲ ಕಾಲದಲ್ಲಿಯೂ ಇತ್ತು. ನಮ್ಮ ಸರಕಾರದ ಅವಧಿಯಲ್ಲಿ ಈ ಮಾಫಿಯಾಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿತ್ತು. ಎನ್‍ಸಿಬಿಯವರು ಈಗ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿಸಿಬಿಯೂ ತನಿಖೆಯಲ್ಲಿ ಕೈ ಜೋಡಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಶಾಸಕರ ಜೊತೆ ಝೂಮ್ ಮೂಲಕ ಸಮಾಲೋಚನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿದ್ಯಾರ್ಥಿಗಳು, ಸಿನಿಮಾ ನಟರು, ರಾಜಕಾರಣಿಗಳು, ಅವರ ಮಕ್ಕಳು ಸೇರಿದಂತೆ ಈ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಟಿ ರಾಗಿಣಿಗೂ ನಮಗೂ ಸಂಬಂಧ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅವರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರ ಜೊತೆ ಭಾಗಿಯಾಗಿರುವ ಫೋಟೋ ಮತ್ತು ವೀಡಿಯೋ ಇದೆ. ತನಿಖೆ ನಡೆಯಲಿ. ಇದಕ್ಕೆ ನಮ್ಮ ತಕರಾರು ಏನೂ ಇಲ್ಲ ಎಂದು ಅವರು ತಿಳಿಸಿದರು.
ಡ್ರಗ್ ಮಾಫಿಯಾದಲ್ಲಿ ಭಾಗಿಯಾದವರನ್ನು ತನಿಖೆಯಿಂದ ಪಾರು ಮಾಡಲು ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಮಾತಿಗೆ ಹೇಳಬಾರದು. ಆ ಕುರಿತು ನನಗೆ ಮಾಹಿತಿ ಇಲ್ಲ. ಡ್ರಗ್ ಮಾಫಿಯಾ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡುತ್ತೇವೆ. ಈ ಮಾಫಿಯಾದಲ್ಲಿ ಶಾಸಕ ಝಮೀರ್ ಅಹ್ಮದ್ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆ ಇದೆಯೇ? ಸಾಕ್ಷ್ಯ ಇದ್ದರೆ ಪೊಲೀಸರಿಗೆ ತೋರಿಸಲಿ. ರಾಜಕಾರಣಕ್ಕಾಗಿ ಸುಖಾಸುಮ್ಮನೆ ಒಬ್ಬರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ತನಿಖೆ ಮಾಡುತ್ತಿರುವುದು ನಾನು ಅಥವಾ ಮಾಧ್ಯಮದವರಲ್ಲ. ಪೊಲೀಸರು ಆ ಕೆಲಸ ಮಾಡುತ್ತಿದ್ದಾರೆ. ಯಾರೇ ಆರೋಪ ಮಾಡಿದ್ದರೂ ತನಿಖೆ ನಡೆಯಲಿ. ಸಾಕ್ಷ್ಯಾಧಾರ ಸಿಕ್ಕರೆ ಪೊಲೀಸರು ಕ್ರಮ ಕೈಗೊಳ್ಳಲಿ. ಅದಕ್ಕೆ ನಾವು ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಸರಕಾರ ಕಠಿಣವಾದ ಕಾನೂನು ಜಾರಿಗೆ ತರಲಿ. ಅದಕ್ಕೆ ನಮ್ಮ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ಕಾಂಗ್ರೆಸ್ ಶಾಸಕಾಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಉಭಯ ಸದನದ ಪಕ್ಷದ ಸದಸ್ಯರ ಜೊತೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಸರಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಡ್ರಗ್ ಮಾಫಿಯಾ, ಡಿ.ಜೆ.ಹಳ್ಳಿ ಘಟನೆ, ಜಿಎಸ್‍ಟಿ ಹಾಗೂ ವಿವಿಧ ವಿಧೇಯಕಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಅಂತರ್ ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ತೆರೆದಿದ್ದ ಕೋವಿಡ್ ಆರೈಕೆ ಕೇಂದ್ರ ಮುಚ್ಚುವ ಹಂತಕ್ಕೆ ಬಂದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸೋಂಕಿತರು ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕೇಂದ್ರ ಮುಚ್ಚಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಕೈಗಾರಿಕೆ ವಲಯದ ಕುಸಿತ: ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ರಿಂದ 17ನೇ ಸ್ಥಾನಕ್ಕೆ ಕುಸಿದಿದೆ. 2017-18ರಲ್ಲಿ ಕನಾಟಕ 8ನೇ ಸ್ಥಾನದಲ್ಲಿತ್ತು. ಅದಕ್ಕೂ ಮೊದಲು 2012-13ನೇ ಸಾಲಿನಲ್ಲಿ 13ನೇ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನಕ್ಕೆ ಹೋಗಿದೆ. ಅದಕ್ಕೆ ಈ ಹಿಂದೆ ಆಡಳಿತ ನಡೆಸಿದವರು ಕಾರಣ ಎಂದು ಬಿ.ವೈ.ವಿಜಯೇಂದ್ರ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿ ಇಲ್ಲವೇ. ಸರಕಾರ ನಡೆಸುತ್ತಿರುವವರು ಏನನ್ನು ಕಡಿದು ಕಟ್ಟೆ ಹಾಕಿದ್ದಾರೆ. 17ನೇ ಸ್ಥಾನಕ್ಕೆ ಹೋಗಲು 8ನೇ ಸ್ಥಾನದಲ್ಲಿದ್ದಾಗ ಸರಕಾರ ನಡೆಸಿದವರು ಕಾರಣವೇ ಅಥವಾ 17ನೇ ಸ್ಥಾನದಲ್ಲಿರುವಾಗ ಇರುವ ಸರಕಾರ ಕಾರಣವೇ? ಜನರಿಗೆ ತಪ್ಪು ಮಾಹಿತಿ ಕೊಡಬಾರದು ಎಂದು ಅವರು ತಿರುಗೇಟು ನೀಡಿದರು.
ಸ್ವರ್ಗವೋ ನರಕವೋ?: ಖಜಾನೆಯಲ್ಲಿ ಹಣ ಇಲ್ಲ ಎಂಬುದಕ್ಕೆ ಕೊರೋನ ಕಾರಣ ಎಂದು ಹೇಳುತ್ತಾರೆ. ಜಾಗತಿಕ ಬ್ಯಾಂಕ್‍ಗಳ ಮೂಲಕ ಸಾಲ ತಂದು ಕೇಂದ್ರ ಸರಕಾರ ಜನರಿಗೆ ಸಹಾಯ ಮಾಡಬೇಕು. ಸಬ್ಸಿಡಿ ಇಲ್ಲ, ಸಂಬಳ ಕೊಡಲಾಗದು, ಜಿ.ಎಸ್.ಟಿ. ಪರಿಹಾರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದಾದರೆ ಅಧಿಕಾರದಲ್ಲಿ ಏಕಿರಬೇಕು. ಇದನ್ನು ಹೇಳಲು ಜನರು ಬಿಜೆಪಿಯವರನ್ನು ಕೇಂದ್ರದಲ್ಲಿ ಅಧಿಕಾರದಲ್ಲಿ ಕೂರಿಸಿದ್ದಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ರೀತಿ ಎಲ್ಲವನ್ನೂ ನಿರಾಕರಿಸುವುದು ಒಕ್ಕೂಟ ವ್ಯವಸ್ಥೆ, ಸಂವಿಧಾನಕ್ಕೆ ವಿರುದ್ಧವಾದ ನಡೆ, ಜನರಿಗೆ ಮಾಡುವ ದ್ರೋಹ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎಲ್ಲವೂ ದೇವರ ಆಟ ಎಂದು ಹೇಳುವುದಾದರೆ ಸರಕಾರದ ಜವಾಬ್ದಾರಿ ಏನು? ಇದಕ್ಕೆಲ್ಲ ನರೇಂದ್ರ ಮೋದಿ ಸರಕಾರವೇ ಕಾರಣ. ಜಿಡಿಪಿ ಕಡಿಮೆಯಾದರೆ ಉದ್ಯೋಗ ಸೃಷ್ಟಿ ಆಗುವುದಿಲ್ಲ. ದೇಶದಲ್ಲಿ ಈಗ 12ರಿಂದ 15 ಕೋಟಿ ಉದ್ಯೋಗ ಹೋಗಿದೆ ಎಂದು ವರದಿಗಳು ಹೇಳುತ್ತವೆ. ದಿಲ್ಲಿಯಲ್ಲಿ ಮತ್ತು ಕರ್ನಾಟದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಸ್ವರ್ಗ ಮಾಡುತ್ತೇವೆ ಎಂದರು. ಇದು ಸ್ವರ್ಗವೋ ನರಕವೋ? ಎಂದು ಅವರು ಹೇಳಿದರು.







