ಎಲ್ಗಾರ್ ಪರಿಷತ್ ಪ್ರಕರಣ: ಇಬ್ಬರು ಪ್ರೊಫೆಸರ್, ಓರ್ವ ಪತ್ರಕರ್ತನಿಗೆ ಎನ್‌ಐಎ ಸಮನ್ಸ್

ಮುಂಬೈ, ಸೆ.7: ಎಲ್ಗಾರ್ ಪರಿಷತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಹೈದರಾಬಾದ್ ಹಾಗೂ ಕೋಲ್ಕತಾದ ಕೆಲವು ಶಿಕ್ಷಣತಜ್ಞರು ಹಾಗೂ ಓರ್ವ ಪತ್ರಕರ್ತನಿಗೆ ವಿಚಾರಣೆಗಾಗಿ ಸೋಮವಾರ ಸಮನ್ಸ್ ನೀಡಿದೆ.
ಹೈದರಾಬಾದ್‌ನ ವಿದೇಶಿ ಭಾಷಾ ವಿಶ್ವವಿದ್ಯಾನಿಲಯ (ಇಎಫ್‌ಎಲ್‌ಯು)ಗ ಪ್ರೊಫೆಸರ್, 51 ವರ್ಷ ವಯಸ್ಸಿನ ಕೆ. ಸತ್ಯನಾರಾಯಣ, ‘ದಿ ಹಿಂದೂ’ ಆಂಗ್ಲ ದೈನಿಕದ ಪತ್ರಕರ್ತ ಕೆ.ವಿ. ಕುರ್ಮಾನಾಥ್ ಹಾಗೂ 42 ವರ್ಷ ವಯಸ್ಸಿನ ಕೋಲ್ಕತಾ ಮೂಲದ ಜೀವವಿಜ್ಞಾನಿ ಹಾಗೂ ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಪಾರ್ಥೊ ಸಾರಥಿ ರಾಯ್ ಗೆ ಎನ್‌ಐಎ ಸಮನ್ಸ್ ನೀಡಿದೆ.
ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಶೀಘ್ರದಲ್ಲೇ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಹಾಗೂ ಪೌರ ಸ್ವಾತಂತ್ರ್ಯಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ವಿರುದ್ಧ ಮುಂದಿನ ತಿಂಗಳು ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಪೂರಕ ಚಾರ್ಜ್‌ಶೀಟ್‌ಸಲ್ಲಿಸುವುದು ಇದು ಮೂರನೆ ಸಲವಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಹಲವಾರು ಮಂದಿಯನ್ನು ಎನ್‌ಐಎ ಪ್ರಶ್ನಿಸಿದೆ. ಪ್ರಕರಣದಲ್ಲಿ ಬಂಧಿತರಾದ ಸಾಮಾಜಿಕ ಕಾರ್ಯಕರ್ತರ ಪರವಾಗಿ ವಾದಿಸುತ್ತಿರುವ ನ್ಯಾಯವಾದಿಗಳಿಗೂ ಕೂಡಾ ಎನ್‌ಐಎ ಸಮನ್ಸ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಸತ್ಯನಾರಾಯಣ ಅವರು ರವಿವಾರ ಈ ಬಗ್ಗೆ ಬಹಿರಂಗ ಹೇಳಿಕೆಯೊಂದನ್ನು ನೀಡಿದ್ದು, ಎನ್‌ಐಎ ನೀಡಿರುವ ಸಮನ್ಸ್ ತಾನು ಈಗಾಗಲೇ ಎದುರಿಸುತ್ತಿರುವ ಮಾನಸಿಕ ಒತ್ತಡವನ್ನು ಉಲ್ಬಗೊಳಿಸಿದೆ ಎಂದು ಹೇಳಿದ್ದಾರೆ. ಸತ್ಯನಾರಾಯಣ ಹಾಗೂ ಕುರ್ಮಾನಾಥ್ ಇಬ್ಬರೂ ಬಂಧನದಲ್ಲಿರುವ ಕವಿ, ಸಾಹಿತಿ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರ ಅಳಿಯಂದಿರಾಗಿದ್ದಾರೆ.
2018ರ ಜನವರಿ 1ರಂದು ಭೀಮಾಕೋರೆಗಾಂವ್ ಸಮರದ 200ನೇ ವರ್ಷಾಚರಣೆಯ ನೆನಪಿಗಾಗಿ ಎಲ್ಗಾರ್ ಪರಿಷತ್ ಸಮಾವೇಶವನ್ನು ಮಹಾರಾಷ್ಟ್ರದ ಶನಿವಾರ್ ವಾಡಾ ಕೋಟೆಯ ಬಳಿ, ಪ್ರಗತಿಪರ ಸಂಘಟನೆಗಳು ಈ ಸಮಾವೇಶ ಆಯೋಜಿಸಿತ್ತು. 35 ಸಾವಿರಕ್ಕೂ ಅಧಿಕ ದಲಿತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಎಲ್ಗಾರ್ ಪರಿಷತ್ ಸಮಾವೇಶದ ಬಳಿಕ ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ಭುಗಿಲೆದ್ದು, ಕನಿಷ್ಠ ಓರ್ವ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದರು. ಎಲ್ಗಾರ್ ಪರಿಷತ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದರಿಂದಲೇ ಹಿಂಸಚಾರ ಸ್ಫೋಟಿಸಿಎಂದು ಪೊಲೀಸರು ಆರೋಪಿಸಿದ್ದರು. ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ಬೆಂಬಲಿಗರು ಈ ಸಮಾವೇಶವನ್ನು ಆಯೋಜಿಸಿದ್ದರು ಎಂದು ಪೊಲೀಸರು ಆಪಾದಿಸಿದ್ದಾರೆ.







