ವಿದ್ಯಾಗಮ ಯೋಜನೆಗೆ ಸರಕಾರಿ ಶಾಲಾ ಶಿಕ್ಷಕರಿಂದಲೆ ವಿರೋಧ: ಕಾಂಗ್ರೆಸ್

ಬೆಂಗಳೂರು, ಸೆ.7: ಸುರೇಶ್ ಕುಮಾರ್ ಅವರೇ, ವಿದ್ಯಾಗಮ ಯೋಜನೆಗೆ ವಿರೋಧ ವ್ಯಕ್ತ ಪಡಿಸುತ್ತಿರುವುದು ಸರಕಾರಿ ಶಾಲಾ ಶಿಕ್ಷಕರು. ಶಸ್ತ್ರ ನೀಡದೆ ಸೈನಿಕರಿನ್ನ ಯುದ್ಧಕ್ಕೆ ಕಳುಹಿಸಿದಂತೆ, ಯಾವುದೇ ರಕ್ಷಣಾ ವ್ಯವಸ್ಥೆ ಕಲ್ಪಿಸದೆ, ಬೀದಿಯಲ್ಲಿ ಪಾಠ ಮಾಡುವಂತೆ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವ ನಿಮ್ಮ ನಡೆ ಅಮಾನವೀಯ ಎಂದು ಕಾಂಗ್ರೆಸ್ ಟೀಕಿಸಿದೆ.
4 ತಿಂಗಳಿಂದ ಸಂಬಳ ಸಿಕ್ಕಿರದ 2 ಲಕ್ಷಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರಿಗೆ ಸರಕಾರವು ಆರ್ಥಿಕ ಪ್ಯಾಕೇಜ್ ಬಿಟ್ಟು ಮಿಕೆಲ್ಲಾ ಸಹಾಯ ಒದಗಿಸಲಿದೆ ಎಂದಿದ್ದೀರ, ಹಾಗಾದ್ರೆ ನೀವು ಅವರ ಮನೆ ಬಾಡಿಗೆ, ವಿದ್ಯುತ್/ಸಿಲಿಂಡರ್ ಬಿಲ್, ಮಕ್ಕಳ ಶಾಲಾ/ಕಾಲೇಜು ಶುಲ್ಕ ಏನಾದರೂ ಕಟ್ಟಿದ್ದೀರಾ? ಸುಳ್ಳು ಹೇಳಿ ರಾಜ್ಯದ ದಾರಿ ತಪ್ಪಿಸುವ ಕೆಲಸ ಮಾಡದಿರಿ ಎಂದು ಟ್ವೀಟರ್ ನಲ್ಲಿ ಕಾಂಗ್ರೆಸ್ ತಿರುಗೇಟು ನೀಡಿದೆ.
ಸಚಿವ ಸುರೇಶ್ ಕುಮಾರ್ ಅವರೇ, ಮೊದಲು ಶಿಕ್ಷಕರಿಗೆ 'ಧನಾಗಮ'ದ ಕರುಣೆ ತೋರಿ, ಆ ಮೇಲೆ ನಮ್ಮ 'ವಿದ್ಯಾಗಮ' ಪ್ರಚಾರ ನಡೆಯಲಿ. ಸಾಲ ಮಾಡಿಯೇ ಸರಕಾರ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ಅವರಿಗೆ ಶಿಕ್ಷಕರ ಸಂಬಳಕ್ಕೂ ಸಾಲ ಮಾಡಲು ಹೇಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.





