ವರದಕ್ಷಿಣೆ ನಿಷೇಧ: ಸಾಂತ್ವನ ಕೇಂದ್ರದ ಸಭೆಯಲ್ಲಿ ಜಿಪಂ ಸಿಇಒ
ಮಂಗಳೂರು, ಸೆ.7: ಜಿಲ್ಲೆಯ ಸಾಂತ್ವನ ಕೇಂದ್ರದಲ್ಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಬಾಕಿ ಇರುವುದು ಗಮನಕ್ಕೆ ಬಂದಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನಲ್ಲಿ ಸೋಮವಾರ ನಡೆದ ಸಾಂತ್ವನ ಕೇಂದ್ರ ಹಾಗೂ ವರದಕ್ಷಿಣೆ ನಿಷೇಧ ಜಿಲ್ಲಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂತ್ವನ ಕೇಂದ್ರದ ಸಿಬ್ಬಂದಿಗೆ ವೇತನ ಬಾಕಿ ಬಿಡುಗಡೆ ಮಾಡುವಂತೆ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಸಾಂತ್ವನ ಕೇಂದ್ರವು ನೊಂದ ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಳ್ಳುವ ವೇದಿಕೆಯಾಗಿದೆ. ಬಡವರು-ಶ್ರೀಮಂತರು ಎನ್ನುವ ಭೇದ-ಭಾವವಿಲ್ಲದೇ ಎಲ್ಲರೂ ಕೌಟುಂಬಿಕ ಸಮಸ್ಯೆಗಳಿಗೆ ಸಾಂತ್ವನ ಕೇಂದ್ರದಲ್ಲಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲಾ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ 1,725 ಪ್ರಕರಣಗಳು ದಾಖಲಾಗಿವೆ. 1,260 ಪ್ರಕರಣಗಳು ಇತ್ಯರ್ಥ ಗೊಂಡಿದ್ದು, 465 ಕೇಸ್‌ಗಳು ಇತ್ಯರ್ಥಗೊಳ್ಳದೇ ಬಾಕಿಯಾಗಿವೆ. ಉಳಿದಿರುವ ಪ್ರಕರಣಗಳಿಗೆ ಆದಷ್ಟು ಬೇಗನೇ ಇತ್ಯರ್ಥ ಮಾಡಿ ಕೊಡುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.
ಲಾಕ್‌ಡೌನ್ ವರದಾನ: ಸಮಾಜದಲ್ಲಿ ಇದ್ದಂತಹ ಅವಿಭಕ್ತ ಕುಟುಂಬಗಳು ಮಾಯವಾಗಿ ಈಗ ವಿಭಕ್ತ ಕುಟುಂಬಗಳನ್ನು ಹೆಚ್ಚು ಕಾಣುತ್ತೇವೆ. ಹಿರಿಯರ ಸೂಕ್ತ ಮಾರ್ಗದರ್ಶವಿಲ್ಲದೇ ಕುಟುಂಬದಲ್ಲಿ ಗಂಡ-ಹೆಂಡತಿ ಸಣ್ಣ ಸಣ್ಣ ಕಾರಣಗಳಿಂದ ಜಗಳವಾಡಿ ಸಂಶಯಪಟ್ಟು ಒಬ್ಬರಿಂದ ಒಬ್ಬರು ದೂರವಾಗುತ್ತಿದ್ದಾರೆ. ಕೋವಿಡ್ ವ್ಯಾಪಕವಾಗಿ ಹರಡಿದ ಪರಿಣಾಮ ದೇಶದಾದ್ಯಂತ ಕೆಲವು ತಿಂಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಇದರ ಪರಿಣಾಮ ಕುಟುಂಬದ ಎಲ್ಲ ಸದಸ್ಯರು ಮನೆಯಲ್ಲೇ ವಾಸ ಮಾಡಬೇಕಾದ ಕಾರಣ ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಲು ಸೂಕ್ತ ಅವಕಾಶ ಸಿಕ್ಕಿತು ಎಂದು ಜಿಪಂ ಸಿಇಒ ಡಾ.ಸೆಲ್ವಮಣಿ ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ನಿರೂಪಣಾ ಅಧಿಕಾರಿ ಶ್ಯಾಮಲಾ, ವಿವಿಧ ಸಾಂತ್ವನ ಕೇಂದ್ರದ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.







