ಹೋರಾಟಗಾರ ಕೆ.ಎಲ್.ಅಶೋಕ್ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸರು: ಆರೋಪ

ಚಿಕ್ಕಮಗಳೂರು, ಸೆ.7: ಪ್ರಗತಿಪರ ಚಿಂತಕ, ಪತ್ರಕರ್ತ, ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯ ಎಸ್ಸೈ ಸೇರಿದಂತೆ ಪೊಲೀಸ್ ಪೇದೆಗಳು ಕಾರು ನಿಲುಗಡೆ ವಿಚಾರ ಸಂಬಂಧ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾದ ಘಟನೆ ಸೋಮವಾರ ಕೊಪ್ಪ ಪಟ್ಟಣದಲ್ಲಿ ವರದಿಯಾಗಿದೆ.
ಖಾಸಗಿ ಕೆಲಸದ ನಿಮಿತ್ತ ಕೆ.ಎಲ್.ಅಶೋಕ್ ಸೋಮವಾರ ಪತ್ನಿ, ಮಗಳು ಹಾಗೂ ಅತ್ತೆಯೊಂದಿಗೆ ಕೊಪ್ಪ ಪಟ್ಟಣಕ್ಕೆ ಕಾರಿನಲ್ಲಿ ಅಗಮಿಸಿದ್ದರು. ಈ ವೇಳೆ ಪಟ್ಟಣದಲ್ಲಿ ನಾನ್ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿಕೊಂಡಿದ್ದಾರೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ಕೊಪ್ಪ ಪೊಲೀಸ್ ಠಾಣೆಯ ಪೇದೆ ಕುಮಾರ ಹಾಗೂ ಮಹಿಳಾ ಪೇದೆಗಳಿಬ್ಬರು ಕಾರು ಪಾರ್ಕಿಂಗ್ ವಿಚಾರ ಪ್ರಸ್ತಾಪಿಸಿ ಕೆ.ಎಲ್.ಅಶೋಕ್ ಅವರಿಗೆ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.
ಈ ವೇಳೆ ಅಶೋಕ್, ಗೊತ್ತಿಲ್ಲದೇ ನಾನ್ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದೇನೆ. ದಂಡ ವಿಧಿಸಿದಲ್ಲಿ ಕಟ್ಟುತ್ತೇನೆಂದು ಹೇಳಿದ್ದಾರೆ. ಅಲ್ಲದೇ ಪೊಲೀಸರ ವರ್ತನೆ ವಿರುದ್ಧ ಸ್ಥಳೀಯ ಶಾಸಕ ರಾಜೇಗೌಡ ಗಮನಕ್ಕೆ ತರವುದಾಗಿ ಹೇಳಿದ್ದಾರೆ. ಆದರೆ ಪೇದೆ ಕುಮಾರ ಇದ್ಯಾವುದನ್ನೂ ಕೇಳದೇ, ಕಾರು ಸೀಝ್ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ಶಾಸಕ ರಾಜೇಗೌಡನಿಗಲ್ಲದಿದ್ದರೂ ಅವರಪ್ಪನಿಗೆ ಹೇಳು ಎಂದು ಏಕವಚನದಲ್ಲಿ ಮಾತನಾಡಿದ್ದಾರೆಂದು ತಿಳಿದು ಬಂದಿದೆ.
ನಂತರ ಅಶೋಕ್ ಅವರ ಕಾರು ಸೀಝ್ ಮಾಡಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದು, ಈ ವೇಳೆ ಠಾಣಾಧಿಕಾರಿ ರವಿ ಕೂಡ ಅಶೋಕ್ ಅವರೊಂದಿಗೆ ಉಡಾಫೆಯಾಗಿ ಮಾತನಾಡಿದ್ದಾರೆಂದು ತಿಳಿದು ಬಂದಿದೆ.
ಕೊಪ್ಪ ಪಟ್ಟಣದಲ್ಲಿ ಕಾರು ಪಾರ್ಕಿಂಗ್ ಮಾಡುವ ಸಂದರ್ಭ ಗೊತ್ತಿಲ್ಲದೇ ನಾನ್ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿಕೊಂಡಿದ್ದೆ. ಇದನ್ನು ಪೊಲೀಸ್ ಪೇದೆ ಕುಮಾರ್ ಎಂಬಾತ ಪ್ರಶ್ನಿಸಿದ ವೇಳೆ ದಂಡ ಹಾಕಿದಲ್ಲಿ ನ್ಯಾಯಾಲಯದಲ್ಲಿ ದಂಡ ಕಟ್ಟುವುದಾಗಿ ಹೇಳಿದ್ದೇನೆ. ಆದರೆ ಪೊಲೀಸರು ಉದ್ದೇಶಪೂರ್ವಕವಾಗಿ ನನಗೆ ಮತ್ತು ನನ್ನ ಪತ್ನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆ. ಠಾಣೆಗೆ ಕರೆಸಿಕೊಂಡ ಎಸ್ಸೈ ಕೂಡ ಉಡಾಫೆ ಉತ್ತರ ನೀಡಿದ್ದಾರೆ. ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಬೇಕಾದ ಕೊಪ್ಪ ಪೊಲೀಸರ ವರ್ತನೆಯಿಂದ ನೋವಾಗಿದೆ. ಪೊಲೀಸರ ವರ್ತನೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ.
- ಕೆ.ಎಲ್.ಅಶೋಕ್
ಕೆ.ಎಲ್.ಅಶೋಕ್ ಯಾರೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಆದರೆ ಪೊಲೀಸರಿಗೆ ಗೊತ್ತಿಲ್ಲದಿರುವುದು ಹಾಸ್ಯಾಸ್ಪದ. ಕೊಪ್ಪ ಪೊಲೀಸರು ಪಟ್ಟಣದಲ್ಲಿ ಕೆ.ಎಲ್.ಅಶೋಕ್ ಅವರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ನಾನ್ ಪಾರ್ಕಿಂಗ್ ಜಾಗದಲ್ಲಿ ಅವರು ಗೊತ್ತಿಲ್ಲದೇ ಕಾರು ನಿಲ್ಲಿಸಿದ್ದಾರೆ. ಇದನ್ನು ಪೊಲೀಸರು ಪ್ರಶ್ನಿಸಿದಾಗ ದಂಡ ಕಟ್ಟುವುದಾಗಿಯೂ ತಿಳಿಸಿದ್ದಾರೆ. ಆದರೆ ಪೊಲೀಸರು ಉದ್ದೇಶ ಪೂರ್ವಕವಾಗಿ ಅಶೋಕ್ ಹಾಗೂ ಅವರ ಕುಟುಂಬಸ್ಥರನ್ನು ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಠಾಣಾಧಿಕಾರಿಯೂ ಅನುಚಿತವಾಗಿ ನಡೆದುಕೊಂಡಿದ್ದಾರೆ. ಈ ಘಟನೆ ಸಂಬಂಧ ಎಸ್ಪಿ ತನಿಖೆ ನಡೆಸಿ ಪೊಲೀಸ್ ಪೇದೆಯನ್ನು ಅಮಾನತು ಮಾಡಬೇಕು. ಅಶೋಕ್ ರಾಜ್ಯ ಮಟ್ಟದ ಹೋರಾಟಗಾರ, ಪತ್ರಕರ್ತರಾಗಿದ್ದಾರೆ. ಇಂತವರೊಂದಿಗೆ ಪೊಲೀಸರು ಇಂತಹ ದರ್ಪ ತೋರುತ್ತಾರೆಂದರೆ ಮಲೆನಾಡಿನ ಮುಗ್ಧ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆಂದು ಊಹಿಸಿದರೆ ಭಯವಾಗುತ್ತದೆ.
- ಗೌಸ್ ಮೊಹಿದ್ದೀನ್, ಸಾಮಾಜಿಕ ಕಾರ್ಯಕರ್ತ
ನಾನ್ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿರುವುದನ್ನು ಗಮನಿಸಿ ಪೊಲೀಸರು ಕಾರು ತೆಗೆಯಲು ಹೇಳಿರಬಹುದೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಅಶೋಕ್ ಅವರನ್ನು ನಾವು ಠಾಣೆಗೂ ಕರೆಸಿಲ್ಲ, ನಿಂದಿಸಿಯೂ ಇಲ್ಲ.
- ರವಿ, ಠಾಣಾಧಿಕಾರಿ, ಕೊಪ್ಪ ಪೊಲೀಸ್ ಠಾಣೆ







