ಮಾಣಿ ಸ್ಕೌಟ್ ಸಂಸ್ಥೆಯಿಂದ ಗಂಟಲು ದ್ರವ ಪರೀಕ್ಷಾ ಉಪಕರಣದ ಕೊಡುಗೆ

ಬಂಟ್ವಾಳ, ಸೆ.7: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ವತಿಯಿಂದ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಗು ಗಂಟಲ ದ್ರವ ಸಂಗ್ರಹಿಸುವ ಉಪಕರಣ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆ ಯವರು ಉಪಕರಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ 19 ಜಗತ್ತನ್ನೇ ಬಾಧಿಸಿದ್ದು,ಇದರಿಂದ ನಾನಾ ರೀತಿಯ ಸಮಸ್ಯೆಗಳಾಗಿವೆ. ಇಂತಹಾ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವ ಉದ್ದೇಶದಿಂದ ಮಾಣಿ ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸರ್ಕಾರಿ ಆಸ್ಫತ್ರೆಗೆ ಕೋರೋನಾ ಪರೀಕ್ಷೆಯ ಸಾಧನ ವನ್ನು ಕೊಡುಗೆಯಾಗಿ ನೀಡಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಣಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿಯವರು ಮಾತನಾಡಿ, ದಾನಿಗಳು ಹಾಗೂ ಸಮಾನ ಮನಸ್ಕರ ಸಹಕಾರ ದೊಂದಿಗೆ ಮಾಣಿ ಸ್ಥಳೀಯ ಸಂಸ್ಥೆಯ ವತಿಯಿಂದ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಕೆಲಸಮಾಡಲಾಗುತ್ತಿದೆ, ರಾಜ್ಯದಲ್ಲೇ ಮೊದಲಬಾರಿ ಎಂಬಂತೆ ನಮ್ಮ ಸ್ಕೌಟ್ಸ್ ಸಂಸ್ಥೆ ವತಿಯಿಂದ ಮೂಗು, ಗಂಟಲು ದ್ರವಪರೀಕ್ಷಾ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದೇವೆ ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಒದಗಿಸಿದ್ದೇವೆ ಎಂದರು.
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಕೊರೋನಾ ನಿಗ್ರಹಕ್ಕೆ ಆಸ್ಪತ್ರೆ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ, ಸ್ಕೌಟ್ಸ್ ಸಂಸ್ಥೆ ವತಿಯಿಂದ ನಮ್ಮ ಆಸ್ಪತ್ರೆಗೆ ಕೊರೋನಾ ಟೆಸ್ಟ್ ಗೆ ಬಳಸುವ ಸಾಧನ ವನ್ನು ನೀಡಿರುವುದು ಹೆಚ್ಚು ಉಪಕಾರಿಯಾಗಿದೆ ಎಂದ ಅವರು, ಇದಕ್ಕಾಗಿ ಹೆಚ್ಚು ಮುತುವರ್ಜಿ ವಹಿಸಿದ ಇಬ್ರಾಹಿಂ ರವರಿಗೆ ಅಭಿನಂದನೆಯನ್ನೂ ಸಲ್ಲಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ರತ್ನಾವತಿ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ ಶುಭಹಾರೈಸಿದರು.
ಮಾಣಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಇಬ್ರಾಹಿಂ ಕೆ. ಮಾಣಿ, ಮಾಣಿ ಗ್ರಾ.ಪಂ ನ ನಿಕಟಪೂರ್ವ ಅಧ್ಯಕ್ಷೆ ಮಮತಾ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತೀಶ್ , ಪ್ರಮುಖರಾದ ಡಾ.ಮನೋಹರ್ ರೈ, ಜಗನ್ನಾಥ ಚೌಟ, ತನಿಯಪ್ಪ ಗೌಡ, ಲ್ಯಾಬ್ ಟೆಕ್ನೀಶಿಯನ್ ವಸುಧಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಾಣಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಮ್ಮರಗಿ ಶರಣಪ್ಪ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸದಾನಂದ ಟಿ.ಎಂ. ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಯಶೋಧಾ ವಂದಿಸಿದರು. ಬುಲ್ ಬುಲ್ ಶಿಕ್ಷಕಿ ಸೌಮ್ಯ ಸಹಕರಿಸಿದರು.







