ಕೆಲಸದಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಅನ್ಯಾಯ: ಡಾ. ಎಂ.ಹೆಚ್. ರವೀಂದ್ರನಾಥ

ದಾವಣಗೆರೆ: ನ್ಯಾಯಸಮ್ಮತವಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ತಮ್ಮ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಪ ಹೋರಿಸಿ, ಕೆಲಸದಿಂದ ಅಮಾನತುಗೊಳಿಸಿ ಅನ್ಯಾಯ ಮಾಡಿದ್ದಾರೆ ಎಂದು ಡಾ. ಎಂ.ಹೆಚ್. ರವೀಂದ್ರನಾಥ ತಮ್ಮ ಆಳಲು ತೋಡಿಕೊಂಡರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 24 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ದಾವಣಗೆರೆ, ಚಿಕ್ಕಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸೇವೆಸಲ್ಲಿಸಿದ್ದೇನೆ. ಆದರೆ ಬಳ್ಳಾರಿಯಲ್ಲಿ ಜಿಲ್ಲಾ ಆರ್‌ಸಿಹೆಚ್ ಆಗಿ ಕಾರ್ಯನಿರ್ವಹಿಸುವ ವೇಳೆ ಅಲ್ಲಿನ ಜಿಪಂ ಸಿಇಓ ಅವರು ಆರೋಪಗಳನ್ನು ಹೋರಿಸಿ ಕೆಲಸದಿಂದ ಅಮಾನತು ಗೊಳಿಸಿದ್ದಾರೆ. ಆದ ಕಾರಣ ತಾವೀಗ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದೇನೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ತಾವು ಆರ್‌ಸಿಹೆಚ್ ಆಗಿ ಕಾರ್ಯನಿರ್ವಹಿಸುವ ವೇಳೆ 28ನೇ ಸ್ಥಾನದಲ್ಲಿದ್ದ ಬಳ್ಳಾರಿಯನ್ನು ಪರಿಶ್ರಮವಹಿಸಿ 4ನೇ ಸ್ಥಾನಕ್ಕೆ ಏರುವಂತೆ ಮಾಡಿದ್ದೆ. ದಾವಣಗೆರೆಯಲ್ಲಿ ಉತ್ತಮ ವೈದ್ಯ ಎಂಬ ಬಿರುದು ಪಡೆದಿದ್ದೆ. ಆದರೆ, ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಕೆ.ವಿ. ರಾಜೇಂದ್ರ ಅವರ ಪತ್ನಿಯ ಅಕ್ರಮ ನೇಮಕಾತಿ ಮಾಡಿದ್ದರು. ನಾನದನ್ನು ಆರ್‌ಡಿಪಿಆರ್ ಸೆಕ್ರೆಟರಿಗೆ ದೂರು ಸಲ್ಲಿಸಿದ್ದೆ. ಅಂದಿನಿಂದ ಅವರು ನನ್ನ ವರ್ಗಾವಣೆಗೊಳಿಸಲು ಪ್ರಯತ್ನಿಸಿದರು. ಅದು ಆಗದಿದ್ದಾಗ ಸುಖಾಸುಮ್ಮನೆ ಆರೋಪ ಮಾಡಿ ಕೆಲಸದಿಂದ ಅಮಾನತ್ತುಗೊಳಿಸುವಂತೆ ಡಿಹೆಚ್‌ಓಗೆ ಸೂಚಿಸಿದರು. ಡಿಹೆಚ್‌ಓ ಆ ಬಗ್ಗೆ ಪರಿಶೀಲನೆ ನಡೆಸದೆ 2018ರಲ್ಲಿ ಅಮಾನತ್ತುಗೊಳಿಸಿದರು. ಅದಕ್ಕಾಗಿ ಕೆಇಟಿನಲ್ಲಿ ಮೊಕದ್ದಮೆ ದಾಖಲಿಸಿದ ಫಲವಾಗಿ ನನ್ನ ಪರ ತೀರ್ಪು ಸಿಕ್ಕಿತು. ಹಾಗಿದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮತ್ತೊಮ್ಮೆ ಕೆಇಟಿಗೆ ದೂರು ಸಲ್ಲಿಸಿದಾಗ ಜಿಲ್ಲಾ ಮಟ್ಟದಲ್ಲಿ ಸ್ಥಳ ನಿಯುಕ್ತಿಗೊಳಿಸಲು ಆದೇಶ ಬಂದರೂ ಸಹ ತಾಲೂಕಿನಲ್ಲಿಯೆ ನಿಯುಕ್ತಿ ಮಾಡಿದರು ಎಂದು ಆರೋಪಿಸಿದರು.
ಅಲ್ಲಿಗೆ ಹೋಗಲು ನಿರಾಕರಿಸಿ, ಈ ಬಗ್ಗೆ ಮತ್ತೆ ದೂರು ದಾಖಲಿಸಿದ್ದೇನೆ. ಈಗಾಗಲೇ ಹದಿನೈದು ತಿಂಗಳಿಂದ ವೇತನ ನೀಡಿಲ್ಲ. ನ್ಯಾಯಾಲಯದ ತೀರ್ಪು ನನ್ನ ಪರವಾಗಿದ್ದರೂ ಅಧಿಕಾರಿಗಳು ಅದನ್ನು ಉಲ್ಲಂಘಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಯಥೇಚ್ಛವಾಗಿ ಹಗರಣಗಳು ನಡೆಯುತ್ತಿವೆ. ಅಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಸೂಕ್ತ ಸ್ಥಾನಮಾನ ಸಿಗುತ್ತಿದೆ ಎಂದು ಆಪಾದಿಸಿದರು.
ಜಿಲ್ಲಾ ಆಟೋ ಡ್ರೈವರ‍್ಸ್ ಸಂಘದ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, ಒಬ್ಬ ವೈದ್ಯಾಧಿಕಾರಿಯಾಗಿ ರವೀಂದ್ರನಾಥ್ ಅವರು ಆಟೋ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡಿರುವುದು ಒಂದೆಡೆ ಖುಷಿಯಾದರೆ ಮತ್ತೊಂದೆಡೆ ಐಎಎಸ್ ಅಧಿಕಾರಿಗಳು ನೀಡಿರುವ ಮಾನಸಿಕ ಕಿರುಕುಳದಿಂದ ಅವರಿಗೆ ಆಗಿರುವ ಅನ್ಯಾಯ ಬೇಸರ ಮೂಡಿಸಿತು. ಸರ್ಕಾರ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಐಎಎಂ ನ ಸದಸ್ಯ ಡಾ. ಜಯಂತ್ ಇದ್ದರು.







