ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಸಂಸ ಧರಣಿ

ಮಂಡ್ಯ, ಸೆ.7: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನ ಹಾಗೂ ಪ್ರಸಕ್ತ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಒಳ ಮೀಸಲಾತಿ ಮೂಲಕ ಮುಂದಕ್ಕೆ ತರಬಹುದೆಂದು ಸುಪ್ರೀಂಕೋರ್ಟ್ ನ ಪೀಠವು ಇತ್ತೀಚೆಗೆ ನೀಡಿರುವ ತಿರ್ಪು ಐತಿಹಾಸಿಕ ತೀರ್ಪಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪರಿಶಿಷ್ಟರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದಕ್ಕೆ ತರುವ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಈವರೆಗೆ ಪರಿಶಿಷ್ಟ ಸಮುದಾಯದ ಒಂದೆರಡು ಅಸ್ಪೃಶ್ಯ ಜಾತಿಗಳಿಷ್ಟೆ ಈ ಮೀಸಲಾತಿಯ ಅನುಕೂಲ ದೊರಕಿದೆ. ಒಳ ಜಾತಿಗಳಿಗೆ ಮೀಸಲಾತಿ ಅನುಕೂಲ ಲಭಿಸಿಲ್ಲ ಎಂದು ಅವರು ತಿಳಿಸಿದರು.
ಪರಿಶಿಷ್ಟರಲ್ಲಿ ಅಸ್ಪೃಶ್ಯ ಜಾತಿಯ ಮಾದಿಗರು, ಅಲೆಮಾರಿ ಸಮುದಾಯದವರು ತೀರಾ ಅಸಮಾನತೆಗೆ ಗುರಿಯಾಗಿ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ. ಪರಿಶಿಷ್ಟ ಸಮುದಾಯದ ಸ್ಪೃಶ್ಯ ಜಾತಿಯವರು ಇವರನ್ನು ಮುಟ್ಟಿಸಿಕೊಳ್ಳುವುದೂ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಮೀಸಲಾತಿ ಕೋಟಾದಡಿ ಸರಕಾರಿ ಉದ್ಯೋಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಅತ್ಯಂತ ತುಳಿತಕ್ಕೆ ಒಳಗಾಗಿರುವ ಈ ಜಾತಿಗಳನ್ನು ಗುರುತಿಸಿ ಒಳ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಜೆ.ಜೆ.ಸದಾಶಿವ ಆಯೋಗದ ವರದಿಯನ್ನು ಪ್ರಸ್ತುತ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ಸಂಘಟನಾ ಸಂಚಾಲಕರಾದ ಬಿ.ಆರ್.ಅರ್ಮುಗಂ, ಸುಬ್ರಹ್ಮಣ್ಯಕುಮಾರ್, ಗಣೇಶ್, ಪಳನಿಯಮ್ಮ, ಕುಪ್ಪಯ್ಯ, ವಿಜಯಕುಮಾರ್, ದಿನೇಶ್, ಮಂಜುನಾಥ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







