ದಸರಾ ಉದ್ಘಾಟನೆಗೆ ಪೌರಕಾರ್ಮಿಕರಿಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು,ಸೆ.7: ಸ್ವಚ್ಛ ನಗರಿ ಪಟ್ಟವನ್ನು ಪಡೆಯಲು ಶ್ರಮಿಸಿದ ಅರುಂಧತಿಯಾರ್ ಪೌರಕಾರ್ಮಿಕರಿಂದ ಈ ಬಾರಿಯಾದರೂ ನಾಡಹಬ್ಬ ದಸರಾ ಉದ್ಘಾಟನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಮಹಾನಗರ ಪಾಲಿಕೆಯ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಸ್ವಚ್ಛ ಭಾರತದ ನಾಯಕರು ಪೌರಕಾರ್ಮಿಕರು. ಇಂತಹ ನಾಯಕರನ್ನು ಹಿಂದಿನ ಸರ್ಕಾರಗಳು ಸರಿಯಾಗಿ ಗುರುತಿಸಿ ಗೌರವಿಸಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪೌರಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ಗೌರವಿಸಿದ್ದಾರೆ. ಅದೇ ರೀತಿ ಮೈಸೂರು ಸ್ವಚ್ಛ ನಗರಿ ಪಟ್ಟ ಪಡೆಯಲು ಶ್ರಮಿಸಿದ ಪೌರಕಾರ್ಮಿಕರಿಗೆ ದಸರಾ ಉದ್ಘಾಟನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಯನ್ನು ಅರುಂಧತಿಯಾರ್ ಪೌರಕಾರ್ಮಿಕರಿಂದ ಮಾಡಿಸಲು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಮಾಡಿ ಅವಕಾಶ ಕಲ್ಪಿಸಬೇಕು. ಈ ರಾಜ್ಯದಲ್ಲೂ ಅರುಂಧತಿಯಾರ್ ಪೌರಕಾರ್ಮಿಕರಿಗೆ ತಮಿಳುನಾಡಿನ ರೀತಿ ಪ್ರತ್ಯೇಕವಾಗಿ ಶೇ.3%ರಷ್ಟು ಒಳಮೀಸಲು ನೀಡಿ ಪೌರಕಾರ್ಮಿಕರು ಅಭಿವೃದ್ಧಿ ಹೊಂದುಲು ತೀರ್ಮಾನಿಸಬೇಕು. ನಂ.1ಪಟ್ಟ ಪಡೆಯಲು ಶ್ರಮಿಸಿದ ಅರುಂಧತಿಯಾರ್ ಪೌರಕಾರ್ಮಿಕರೆಲ್ಲರೂ ಮನೆ ನಿವೇಶನ ರಹಿತರಾದವರೇ ಅತಿ ಹೆಚ್ಚು ಇದ್ದು ಇವರೆಲ್ಲರಿಗೂ 25 ಎಕರೆ ಜಮೀನನ್ನು ಖರೀದಿಸಿ ಪ್ರತ್ಯೇಕವಾಗಿ ಮನೆಗಳನ್ನು ಕಟ್ಟಿಸಿಕೊಟ್ಟು ಪೌರಕಾರ್ಮಿಕರಿಗೆ ಅತ್ಯಾಧುನಿಕ ಸಮುದಾಯ ಭವನ, ಅಂಗನವಾಡಿ, ಗ್ರಂಥಾಲಯ, ಆಸ್ಪತ್ರೆ, ಕಂಪ್ಯೂಟರ್ ಶಿಕ್ಷಣ ತರಬೇತಿ ಶಾಲೆ,ನಿರ್ಮಾಣ ಮಾಡಿ ಮೂಲಭೂತ ಸೌಲಭ್ಯಗಳೊಂದಿಗೆ ಪೌರಕಾರ್ಮಿಕರ ಬಡಾವಣೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆನ್ ಲೈನ್ ಶಿಕ್ಷಣ ನಡೆಯುತ್ತಿರುವ ಕಾರಣ ಪೌರಕಾರ್ಮಿಕರ ಸಫಾಯಿ ಕರ್ಮಚಾರಿ ಮಕ್ಕಳು ಶಿಕ್ಷಣ ಪಡೆಯಲು ಮೈಸೂರು ಸೇರಿ ರಾಜ್ಯಾದ್ಯಂತ ಉಚಿತವಾಗಿ ಮೀಸಲಾತಿ ಹಣದಿಂದ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಕೊಡಿಸಿಕೊಡಲು ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರೆಲ್ಲರೂ ಸರ್ಕಾರಿ ಸೌಲಭ್ಯ ಪಡೆಯಲು 2020ನೇ ವರ್ಷದಿಂದಲೇ ಜಾರಿಗೆ ಬರುವಂತೆ ಅರುಂಧತಿಯಾರ್ ಜಾತಿ ದೃಢೀಕರಣ ಪತ್ರ ನೀಡಿಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಆದೇಶ ನೀಡಬೇಕು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಅರುಂಧತಿಯಾರ್ ಸಮಾಜದವೆರಲ್ಲರೂ ಒಳಚರಂಡಿ ಕಾರ್ಮಿಕರಾಗಿ ಹೊರಗುತ್ತಿಗೆ ಪೌರಕಾರ್ಮಿಕರಾಗಿ, ವಾಹನ ಚಾಲಕರಾಗಿ, ಸಹಾಯಕರಾಗಿ ಲೋಡರ್ಸ್ ಗಳಾಗಿ, ವಾಟರ್ ವಾಲ್ ಮ್ಯಾನ್ ಗಳಾಗಿ, ಆಪರೇಟರ್ ಗಳಾಗಿ ಇವರೆಲ್ಲರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ನೇರನೇಮಕಾತಿಗೆ ಪರಿಗಣಿಸಿ ಉದ್ಯೋಗ ಭದ್ರತೆ ನೀಡಿ 50ಲಕ್ಷ ರೂ.ವಿಮಾ ಪಾಲಿಸಿ ಮಾಡಿಸಿ ವಿಮಾ ಕಂತಿನ ಹಣವನ್ನು ಪಾಲಿಕೆಗಳ ಮೀಸಲಾತಿ ಹಣದಿಂದ ಕಟ್ಟುವಂತೆ ಮಾಡಿಸಿ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಆದೇಶಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಣ್ಣಯ್ಯ, ಜಿಲ್ಲಾಧ್ಯಕ್ಷ ಹೆಚ್.ಧರ್ಮರಾಜ್, ರಾಜ್ಯ ಗೌರವಾಧ್ಯಕ್ಷ ನಾಗರಾಜ್, ರಾಜ್ಯಾಧ್ಯಕ್ಷ ಆರ್.ಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







