ಜೋರಾಗಿ ಮಾತನಾಡುವುದರಿಂದ ಕೋವಿಡ್ ಹರಡಬಹುದು ಎಂದು ಶಾಸಕರಿಗೆ ಹೇಳಿದ ಸ್ಪೀಕರ್!

ವಿಪಿನ್ ಸಿಂಗ್ ಪರ್ಮಾರ್ (Twitter)
ಶಿಮ್ಲಾ: ಜೋರಾಗಿ ಮಾತನಾಡುವುದರಿಂದ ಕೂಡ ಕೊರೋನವೈರಸ್ ಹರಡಬಹುದು ಎಂದು ಹೇಳಿರುವ ಹಿಮಾಚಲ ಪ್ರದೇಶ ವಿಧಾನಸಭಾ ಸ್ಪೀಕರ್ ವಿಪಿನ್ ಸಿಂಗ್ ಪರ್ಮಾರ್ ಸದನದ ಅಧಿವೇಶನದ ವೇಳೆ ಸದಸ್ಯರು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ವಿಧಾನಸಭಾ ಅಧಿವೇಶನದ ಎರಡನೇ ದಿನದ ಆರಂಭದಲ್ಲಿ ಮಾತನಾಡಿದ ಅವರು "ಸದಸ್ಯರು ಸಾಮಾನ್ಯ ರೀತಿಯಲ್ಲಿ ಮಾತನಾಡಿ ಕೋವಿಡ್ ಹರಡದಂತೆ ಕ್ರಮ ಕೈಗೊಳ್ಳಬೇಕು,'' ಎಂದರು.
ಅವರು ಹೀಗೆ ಹೇಳುತ್ತಿದ್ದಂತೆಯೇ ಶಾಸಕರೆಲ್ಲರೂ ಜೋರಾಗಿ ನಗುತ್ತಾ ಹಾಗೂ ಮಾತನಾಡುತ್ತಾ ಚರ್ಚೆಯಲ್ಲಿ ಭಾಗವಹಿಸಿದರು.
ತರುವಾಯ ಸದಸ್ಯರ ಪೈಕಿ ಯಾರಿಗಾದರೂ ಇನ್ಫ್ಲೂಯೆನ್ಝಾ ಮಾದರಿ ಲಕ್ಷಣಗಳಿದ್ದಲ್ಲಿ ಅವರು ಸದನದ ಅಧಿವೇಶನದಲ್ಲಿ ಭಾಗವಹಿಸುವ ಬದಲು ಗೃಹ ಕ್ವಾರಂಟೈನಿನಲ್ಲಿರಬೇಕೆಂದು ಸ್ಪೀಕರ್ ಹೇಳಿದರು.
ಸೋಮವಾರ ಬಿಜೆಪಿಯ ಇಂದೋರ್ ಶಾಸಕಿ ರೀತಾ ದೇವಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ತರುವಾಯ ಕೋವಿಡ್ನಿಂದ ಗುಣಮುಖರಾಗಿ ಸದನಕ್ಕೆ ಆಗಮಿಸಿದ ಬಿಜೆಪಿಯ ಡೂನ್ ಶಾಸಕ ಪರಮ್ ಜೀತ್ ಸಿಂಗ್ ಅವರನ್ನು ಸ್ಪೀಕರ್ ಸ್ವಾಗತಿಸಿದರು. ರಾಜ್ಯ ಇಂಧನ ಸಚಿವ ಸುಖ್ ರಾಮ್ ಚೌಧುರಿ ಕೂಡ ಕೊರೋನಾದಿಂದ ಗುಣಮುಖರಾಗಿ ಸದನಕ್ಕೆ ಹಾಜರಾಗಿದ್ದಾರೆ.
ಸದ್ಯ ಮೂವರು ಶಾಸಕರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ.







