ಡ್ರಗ್ಸ್ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಮುಕ್ತವಾದ ಸ್ವಾತಂತ್ರ್ಯ : ಡಿಜಿಪಿ ಪ್ರವೀಣ್ ಸೂದ್

ಉಡುಪಿ, ಸೆ. 8: ಬೆಂಗಳೂರಿನಲ್ಲಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾ ಚರಣೆಗೆ ಇಳಿದಿದ್ದು, ಇದು ಕೇವಲ ಬೆಂಗಳೂರಿಗೆ ಸೀಮಿತವಾಗಿರದೆ ಇಡೀ ರಾಜ್ಯದಾದ್ಯಂತ ಮುಂದುವರೆಯಲಿದೆ. ಇದಕ್ಕೆ ಸರಕಾರ ಮುಕ್ತವಾದ ಸ್ವಾತಂತ್ರ ನೀಡಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಡ್ರಗ್ಸ್ ನಿರ್ಮೂಲನೆ ಮಾಡುವಂತೆ ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಡ್ರಗ್ಸ್ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ನೀತಿಯಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡ್ರಗ್ಸ್‌ನ ಬಹಳ ದೊಡ್ಡ ಹಬ್ ಇದೆ. ನಾವು ಬೆಂಗಳೂರು ಮಾತ್ರವಲ್ಲದೆ ಬೆಳಗಾಂ, ಹುಬ್ಬಳ್ಳಿ, ಚಿತ್ರದುರ್ಗ ಸೇರಿದಂತೆ ಹಲವು ಕಡೆ ಗಳಲ್ಲಿಯೂ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ ಎಂದರು.
ಈಗ ನಡೆದಿರುವ ಕಾರ್ಯಾಚರಣೆ ಬಗ್ಗೆ ನನಗೆ ಸಮಾಧಾನ ಇಲ್ಲ. ಇನ್ನು ಹೆಚ್ಚಿನ ಕಾರ್ಯಾಚರಣೆಗಳನ್ನು ನಡೆಸುವಂತೆ ಮತ್ತು ಸಾಫ್ಟ್, ನ್ಯಾಚುರಲ್, ಸಿಂಥೆಟಿಕ್ ಡ್ರಗ್‌ಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಐಜಿಪಿ, ಎಸ್ಪಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ. ಅವರು ಇದರ ಫಲಿತಾಂಶವನ್ನು ನಮಗೆ ತೋರಿಸ ಬೇಕು. ಅದು ಸಮುದ್ರ, ರಸ್ತೆ ಅಥವಾ ವಾಯು ಮಾರ್ಗದಲ್ಲಿ ಬಂದರೂ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪ್ರಸ್ತುತ ಕಾಲೇಜುಗಳು ಬಂದ್ ಆಗಿದ್ದರೂ ಡ್ರಗ್ಸ್ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಸೆಲಿಬ್ರಟಿಸ್‌ಗಳ ಡ್ರಗ್ಸ್ ದಂಧೆ ಕುರಿತು ಬೆಂಗಳೂರು ಕಮಿಷನರ್ ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆಯುವ ಸಂದರ್ಭದಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಕೂಡ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ತನಿಖೆ ಪೂರ್ಣ ಗೊಂಡ ಬಳಿಕ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾ ಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿವೈಎಸ್ಪಿ ಜೈಶಂಕರ್, ಡಿಎಆರ್ ಡಿವೈಎಸ್ಪಿ ರಾಘವೇಂದ್ರ ಉಪಸ್ಥಿತರಿದ್ದರು







