ಮೀನುಗಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು: ಸಂಸದೆ ಶೋಭಾ

ಉಡುಪಿ, ಸೆ.8: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೀನು ಕೃಷಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಮೀನುಗಾರರು ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದು ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳವಾರ ನಗರದ ಪುರಭವನದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ ಪಂಜರ ಮೀನು ಕೃಷಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಯೋಜನೆಯಡಿ ಕೊರೋನಾ ಸೋಂಕಿನ ಸಂಕಷ್ಟಕ್ಕೆ ಒಳಗಾದ ಜನರಿಗೆ ಸ್ವ ಉದ್ಯೋಗ ಕೈಗೊಂಡು ಸ್ವಾವಲಂಬಿ ಆಗುವುದರೊಂದಿಗೆ ಅವರನ್ನು ಸದೃಢವಾಗಿಸುವ ಉದ್ದೇಶದಿಂದ ಅನೇಕಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ದೇಶಾದ್ಯಂತ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು 20 ಸಾವಿರ ಕೋಟಿ ರೂ.ಗಳ ನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ರಾಜ್ಯಕ್ಕೆ 3 ಸಾವಿರ ಕೋಟಿ ರೂ. ಬರಲಿದೆ ಎಂದರು.
ರಾಜ್ಯ ಮೀನುಗಾರಿಕೆ ಮತ್ತು ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕಾ ಇಲಾಖೆಯ ಕಾರ್ಯಕ್ರಮಗಳ ಕೈಪಿಡಿ ಯನ್ನು ಬಿಡುಗಡೆ ಮಾಡಿ ಮಾತನಾಡಿ, ಪಂಜರ ಮೀನುಕೃಷಿಗೆ ಉತ್ತೇಜನ ನೀಡಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸ್ವ ಉದ್ಯೋಗ ಕೈಗೊಳ್ಳುವ ಉದ್ದೇಶದಿಂದ ರಾಜ್ಯದ 30 ಜಿಲ್ಲೆಗಳಲ್ಲಿಯೂ ಪಂಜರ ಕೃಷಿ ಕಾರ್ಯಾಗಾರ ನಡೆಸಿ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 5.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾಶಯವಿದ್ದು ಅದರಲ್ಲಿ ಶೇ.12ರಷ್ಟನ್ನು ಮಾತ್ರ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಮೀನುಗಾರಿಕೆ ಜಂಟಿ ನಿರ್ದೇಶಕ ದಿನೇಶ್‌ಕುಮಾರ್ ಹೆಚ್.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.








