ರೆಡ್‌ಕ್ರಾಸ್ ಉಡುಪಿ ಶಾಖೆಯಲ್ಲಿ ಅವ್ಯವಹಾರ: ಡಾ.ಉಮೇಶ ಪ್ರಭು ಆರೋಪ
ಉಡುಪಿ, ಸೆ.8: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅವರ ನೇತೃತ್ವದಲ್ಲಿ ನೋಂದಣಿಯಾದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಚಾರಿಟೆಬಲ್ ಟ್ರಸ್ಟ್‌ಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಸ್ಥೆಯ ಉಡುಪಿ ಶಾಖೆಯ ಮಾಜಿ ಸಭಾಪತಿ ಡಾ.ಉಮೇಶ ಪ್ರಭು ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್‌ಕ್ರಾಸ್ ಉಡುಪಿ ಶಾಖೆಯಲ್ಲಿ ಅವ್ಯವಹಾರಗಳು ನಡೆಯುತ್ತಿದ್ದು, ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಕೋವಿಡ್-19 ಪ್ರಯುಕ್ತ ಮಾಸ್ಕ್, ಸ್ಯಾನಿಟೈಸರ್, ಸೋಪುಗಳನ್ನು ವಿತರಿಸಲು ಹಾಗೂ ಅರಿವು ಮೂಡಿಸಲು ಬಿಡುಗಡೆಯಾದ 7.25ಲಕ್ಷ ರೂ. ದುರುಪಯೋಗ ಪಡಿಸಲಾ ಗಿದೆ. ಯಾವುದೇ ಟೆಂಡರ್ ಕರೆಯದೆ ತಮಗೆ ಬೇಕಾದ ಅಂಗಡಿಗಳಿಂದ ಈ ಸೊತ್ತುಗಳನ್ನು ಖರೀದಿಸಿ ವಿತರಿಸಲಾಗಿದೆ ಎಂದು ದೂರಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ಬರುವ ಮೊತ್ತವನ್ನು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಬಳಸದೆ ರೆಡ್‌ಕ್ರಾಸ್‌ನ ಪ್ರತ್ಯೇಕ ಖಾತೆಗೆ ಹಾಕಿಕೊಂಡು, ಲಾಭದಾಯಕ ಚಟುವಟಿಕೆ ನಡೆಸುತ್ತಿದ್ದಾರೆ. ಡಿಡಿಆರ್‌ಸಿಯಲ್ಲಿ ತಯಾರಾ ಗುವ ಕೃತಕ ಅವಯವಗಳನ್ನು ಲಾಭದಾಯಕವಾಗಿ ಮಾರಾಟ ಮಾಡುತ್ತಿದ್ದಾರೆ. ಹಲವು ವಿಕಲಚೇತನರಿಗೆ ಕೃತಕ ಅವಯವಗಳನ್ನು ಉಚಿತವಾಗಿ ನೀಡದೆ ಅವ ರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ನಿಟ್ಟಿನಲ್ಲಿ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಟಿ.ಚಂದ್ರಶೇಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಮಾಡಲಾಗಿದೆ. ಟ್ರಸ್ಟ್‌ಗೆ ನಮ್ಮ ಅನುಮತಿ ಇಲ್ಲದೆ ಅರವಿಂದ ನಾಯಕ್ ಸೇರಿದಂತೆ ಇತರರನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಶಾಖೆಯ ತಲ್ಲೂರು ಶಿವರಾಮ ಶೆಟ್ಟಿ, ಜಯರಾಮ ಆಚಾರ್ಯ, ಡಾ.ಅಶೋಕ್ ಕುಮಾರ್ ವೈ.ಜಿ., ಸನ್ಮಾತ್ ಹೆಗ್ಡೆ ಉಪಸ್ಥಿತರಿದ್ದರು.







